ಮಂಗಳೂರು: ಬಾಡಿಗೆ ಮನೆಯ ಕೊಠಡಿಯಲ್ಲಿ ವಿದ್ಯಾರ್ಥಿನಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಅತ್ತಾವರದಲ್ಲಿ ನಡೆದಿದೆ.
ದಂಪತಿಯ ಸೋಗಿಯಲ್ಲಿ ಬಂದಿದ್ದ ಯುವಕ ಹಾಗೂ ವಿದ್ಯಾರ್ಥಿನಿ ಐದು ದಿನಗಳ ಹಿಂದೆಯಷ್ಟೇ ಅತ್ತವಾರದ ಮನೆಯೊಂದರ ಟೇಸರ್ ಮೇಲಿದ್ದ ಕೊಠಡಿಯನ್ನ ಬಾಡಿಗೆ ಪಡೆದಿದ್ದರು. ಆದರೆ ಇಂದು ವಿದ್ಯಾರ್ಥಿನಿಯ ಮೃತ ದೇಹ ಕೊಠಡಿಯಲ್ಲಿ ಪತ್ತೆಯಾಗಿದ್ದು, ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೃತ ವಿದ್ಯಾರ್ಥಿನಿಯನ್ನ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಅಂಜನಾ ವಷಿಷ್ಠ (22) ಎಂದು ಗುರುತಿಸಲಾಗಿದ್ದು, ಉಜಿರೆ ಎಸ್ ಡಿಎಂ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ಈಕೆಯೊಂದಿಗೆ ಬಂದಿದ್ದ ಪ್ರಿಯಕರ ನಾಪತ್ತೆಯಾಗಿದ್ದು, ಆತನೆ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಕಟ್ಟಡದ ಮಾಲೀಕರು ಅನುಮಾನದ ಮೇರೆಗೆ ಕೊಠಡಿಯಲ್ಲಿ ನೋಡಿದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಮೂಲಗಳ ಮಾಹಿತಿಯ ಪ್ರಕಾರ ವಿದ್ಯಾರ್ಥಿನಿ ಅಂಜನಾರ ವಿವಾಹ ಜೂನ್ 26 ರಂದು ಬೇರೆ ಯುವಕನೊಂದಿಗೆ ನಿಗದಿಯಾಗಿತ್ತು. ಸದ್ಯ ಸ್ಥಳದಲ್ಲಿ ದೊರೆತ ಆಧಾರ್ ಕಾರ್ಡ್ ವಿವರದ ಹಿನ್ನೆಲೆಯಲ್ಲಿ ಪೊಲೀಸರು ಯುವತಿಯ ಮಾಹಿತಿ ಸಂಗ್ರಹಿಸಿದ್ದು, ಸದ್ಯ ಘಟನೆಯ ಬಗ್ಗೆ ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.