ಬೆಳಗಾವಿ: ಪ್ರೌಢಶಾಲಾ ಅತಿಥಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಯನ್ನು ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ.
ಸಿದ್ರಾಮ ಲಕ್ಷ್ಮಣ ನಿಂಗರಾಯ(28) ವಿದ್ಯಾರ್ಥಿನಿಯನ್ನು ಅಪಹರಿಸಿದ ಶಿಕ್ಷಕ. 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಿಸಿ ಶಿಕ್ಷಕ ಪರಾರಿಯಾಗಿದ್ದಾನೆ. ಈ ಬಗ್ಗೆ ವಿದ್ಯಾರ್ಥಿನಿ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಅಕ್ಟೋಬರ್ 30 ರಂದು ನನ್ನ ಮಗಳು ಶಾಲೆಯಲ್ಲಿ ಪರೀಕ್ಷೆ ಇದೆ ಎಂದು ಹೇಳಿ ಹೋಗಿದ್ದು, ಸಂಜೆಯಾದವರೂ ವಾಪಸ್ ಬರಲಿಲ್ಲ. ಬಳಿಕ ನಾನು ಗ್ರಾಮದ ಸುತ್ತಮುತ್ತ ಮತ್ತು ಸಂಬಂಧಿಕರ ಮನೆಗೆ ಹೋಗಿ ಹುಡುಕಿದೆವು. ಆದರೆ ನನ್ನ ಮಗಳು ಎಲ್ಲೂ ಪತ್ತೆಯಾಗಿಲ್ಲ. ಬಳಿಕ ನಮ್ಮ ಊರಿನ ಜನರು ಸಿದ್ರಾಮ ಲಕ್ಷ್ಮಣ ನಿಂಗರಾಯ ಅವರ ಜೊತೆಗೆ ಬೇರೆ ಊರಿಗೆ ಹೋಗುತ್ತಿದ್ದನ್ನು ನೋಡಿರುವುದಾಗಿ ಹೇಳಿದ್ದಾರೆ.
ಸಿದ್ರಾಮ ನನ್ನ ಮಗಳ ಜೊತೆ ಪ್ರೀತಿಯ ನಾಟಕವಾಡಿ, ಮನೆ ಬಿಟ್ಟು ಬರುವಂತೆ ಆಕೆಯ ತಲೆ ಕೆಡಿಸಿ ಅಪಹರಿಸಿಕೊಂಡು ಹೋಗಿದ್ದಾನೆ. ಈ ಬಗ್ಗೆ ತಿಳಿದ ತಕ್ಷಣ ಆತನ ಮನೆಗೂ ಹೋಗಿ ವಿಚಾರಿಸಿದೆ. ಆದರೆ ಆತ ಮನೆಯಲ್ಲಿ ಇರಲಿಲ್ಲ. ಕೊನೆಗೆ ಯಮಕನಮರಡಿ ಪೊಲೀಸರಿಗೆ ದೂರು ಕೊಟ್ಟಿದ್ದೇನೆ. ದಯವಿಟ್ಟು ನನ್ನ ಮಗಳನ್ನು ಹುಡುಕಿಕೊಡಿ ಎಂದು ದೂರಿನಲ್ಲಿ ವಿದ್ಯಾರ್ಥಿನಿಯ ತಂದೆ ಮನವಿ ಮಾಡಿಕೊಂಡಿದ್ದಾರೆ.
ಈ ಘಟನೆ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv