– ಬಟ್ಟೆ ಬದ್ಲಾಯಿಸ್ತಿದ್ದಾಳೆ ಎಂದುಕೊಂಡ ಪೋಷಕರು
ಹೈದರಾಬಾದ್: ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಇನ್ನೂ ಐದು ದಿನ ಇರುವಾಗಲೇ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಕತ್ಪಲ್ಲಿಯ ಸರ್ದಾರ್ ಪಟೇಲ್‍ನಗರದಲ್ಲಿ ನಡೆದಿದೆ.
ಮೆಹರ್ ಗಾಯತ್ರಿ ದೇವಿ (14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ದೇವಿ ಬ್ಲೂಮಿಂಗ್ ಡೇಲ್ಸ್ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆದರೆ ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಏನಿದು ಪ್ರಕರಣ?
ಮೃತ ದೇವಿ ಸರ್ದಾರ್ ಪಟೇಲ್‍ನಗರದಲ್ಲಿ ಟೆಕ್ಕಿಯಾಗಿದ್ದ ಕವುರು ಶ್ರೀನಿವಾಸ್ ಅವರ ಒಬ್ಬಳೇ ಮಗಳು. ದೇವಿ ಮನೆಗೆ ಬಂದ ನಂತರ ತನ್ನ ರೂಮಿಗೆ ಹೋಗಿ ಬಾಗಿಲು ಲಾಕ್ ಮಾಡಿಕೊಂಡಿದ್ದಾಳೆ. ಪರೀಕ್ಷೆಯ ಒತ್ತಡದಿಂದ ಮಗಳ ಬೇಸರವಾಗಿದ್ದಾಳೆ ಎಂದು ತಾಯಿ ಭಾವಿಸಿದ್ದರು. ಕೆಲಸ ಮುಗಿಸಿ ರಾತ್ರಿ ತಂದೆ ಶ್ರೀನಿವಾಸ್ ಮನೆಗೆ ಬಂದು ಮಗಳ ಬಗ್ಗೆ ವಿಚಾರಿಸಿದ್ದಾರೆ. ಆಗ ತಾಯಿ ರೂಮಿನಲ್ಲಿ ಬಟ್ಟೆ ಬದಲಾಯಿಸುತ್ತಿರುವುದಾಗಿ ತಿಳಿಸಿದ್ದಾರೆ.
ತುಂಬಾ ಸಮಯವಾದರೂ ಮಗಳು ರೂಮಿನಿಂದ ಹೊರಗೆ ಬರಲಿಲ್ಲ. ಕೊನೆಗೆ ತಾಯಿ ಹೋಗಿ ರೂಮಿನ ಬಾಗಿಲು ಬಡಿದಿದ್ದಾರೆ. ಆದರೆ ಒಳಗಡೆಯಿಂದ ರೂಮ್ ಲಾಕ್ ಆಗಿತ್ತು. ಕೊನೆಗೆ ರೂಮಿನ ಮತ್ತೊಂದು ಕೀ ಬಳಸಿ ಬಾಗಿಲು ತೆರೆದು ನೋಡಿದ್ದಾರೆ. ಆಗ ದೇವಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೋಷಕರು ಶಾಕ್ ಆಗಿದ್ದಾರೆ. ತಕ್ಷಣ ದೇವಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ದೇವಿ ಅಷ್ಟರಲ್ಲೇ ಮೃತಪಟ್ಟಿದ್ದಳು. ಮಾಹಿತಿ ತಿಳಿದು ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಬಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೇರೆ ಆಸ್ಪತ್ರೆಗೆ ರವಾನಿಸಿದ್ದಾರೆ. ವಿದ್ಯಾರ್ಥಿನಿ ಪರೀಕ್ಷೆಯ ಒತ್ತಡಕ್ಕೆ ಒಳಗಾಗಿ ಅಥವಾ ಬೇರೆ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದದು. ಆದರೆ ನಾವು ಎಲ್ಲಾ ರೀತಿಯಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.