CrimeLatestLeading NewsMain PostNational

ವಿದ್ಯಾರ್ಥಿನಿ ತನ್ನ ಖಾಸಗಿ ವೀಡಿಯೋ ಮಾತ್ರ ಬಾಯ್‌ಫ್ರೆಂಡ್‌ಗೆ ಹಂಚಿಕೊಂಡಿದ್ಲು – ವಿವಿ ಸ್ಪಷ್ಟನೆ

ಚಂಡೀಗಢ: ಇಲ್ಲಿನ ವಿಶ್ವವಿದ್ಯಾನಿಲಯದಲ್ಲಿ (Chandigarh University) ವಿದ್ಯಾರ್ಥಿಗಳ ಆಕ್ಷೇಪಾರ್ಹ (Videos Leaked) ವೀಡಿಯೋಗಳನ್ನು ಸೋರಿಕೆ ಮಾಡಿದ ಆರೋಪ ಹೊತ್ತಿರುವ ವಿದ್ಯಾರ್ಥಿನಿ ತನ್ನ ವೈಯಕ್ತಿಕ ವೀಡಿಯೋ ಬಿಟ್ಟು ಬೇರೆ ಯಾವುದೇ ವೀಡಿಯೋ ರೆಕಾರ್ಡ್ (Video Record) ಮಾಡಿಲ್ಲ. ಅಲ್ಲದೇ ಆಕೆ ತನ್ನ ವೈಯಕ್ತಿಕ ವೀಡಿಯೋ ಹಂಚಿಕೊಂಡಿದ್ದು ಆಕೆಯ ಬಾಯ್‌ಫ್ರೆಂಡ್‌ಗೆ ಎಂದು ಚಂಡೀಗಢ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಆರ್.ಎಸ್ ಬಾವಾ (SR Bawa) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ (Hostel) ಸುಮಾರು 60 ವಿದ್ಯಾರ್ಥಿನಿಯರು (Girls Students) ಸ್ನಾನ ಮಾಡುತ್ತಿರುವ ವೀಡಿಯೋವನ್ನು ಸಹ ವಿದ್ಯಾರ್ಥಿನಿಯೊಬ್ಬಳು ಸೆರೆಹಿಡಿದು, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿರುವುದಾಗಿ ಆರೋಪಿಸಲಾಗಿದೆ. ಈ ವೀಡಿಯೋವನ್ನು ಹರಿಬಿಟ್ಟ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ. ವೀಡಿಯೋ ಸೋರಿಕೆಯಾದ ಬೆನ್ನಲ್ಲೇ ಭಾರೀ ಪ್ರತಿಭಟನೆ (Protest) ಬುಗಿಲೆದ್ದಿದ್ದು, ಈ ಬೆನ್ನಲ್ಲೇ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಘಟನೆ ಬಳಿಕ ಹಲವು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವ ಆರೋಪವನ್ನು ಚಂಡೀಗಢ ವಿಶ್ವವಿದ್ಯಾನಿಲಯವು ತಳ್ಳಿಹಾಕಿದೆ. ಒಬ್ಬ ಹುಡುಗಿಗೆ ಮಾತ್ರ ಪ್ರಜ್ಞೆ ತಪ್ಪಿತ್ತು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಬಳಿ ಆರೋಗ್ಯ ಸ್ಥಿರವಾಗಿದೆ ಎಂದು ಖಾಸಗಿ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಹೇಳಿದ್ದಾರೆ.

ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಚಂಡೀಗಢ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಆರ್.ಎಸ್ ಬಾವಾ, ವಿದ್ಯಾರ್ಥಿಗಳ 60 ಆಕ್ಷೇಪಾರ್ಹ ಎಂಎಂಎಸ್‌ಗಳು ಕಂಡುಬಂದಿದೆ ಎನ್ನುತ್ತಿರುವ ವದಂತಿ ಸಂಪೂರ್ಣ ಸುಳ್ಳು ಹಾಗೂ ಆಧಾರ ರಹಿತವಾದುದು. ವಿವಿಯಲ್ಲಿ ವಿದ್ಯಾರ್ಥಿನಿ ಚಿತ್ರೀಕರಿಸಿದ ವೈಯಕ್ತಿಕ ವೀಡಿಯೋವನ್ನು ಹೊರತುಪಡಿಸಿ, ಉಳಿದ ಯಾವುದೇ ಆಕ್ಷೇಪಾರ್ಹ ವೀಡಿಯೋಗಳು ಕಂಡುಬಂದಿಲ್ಲ. ಅಲ್ಲದೇ ವಿದ್ಯಾರ್ಥಿನಿ ತನ್ನ ವೈಯಕ್ತಿಕ ವೀಡಿಯೋವನ್ನು ಸ್ವತಃ ತನ್ನ ಬಾಯ್‌ಫ್ರೆಂಡ್‌ಗೆ ಹಂಚಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ಚಂಡೀಗಢ ವಿಶ್ವವಿದ್ಯಾನಿಲಯವು ಸ್ವಯಂಪ್ರೇರಿತವಾಗಿ ತನಿಖೆಯನ್ನು ಪಂಜಾಬ್ ಪೊಲೀಸರಿಗೆ ಒಪ್ಪಿಸಿದೆ ಎಂದು ಬಾವಾ ತಿಳಿಸಿದ್ದಾರೆ.

ಉನ್ನತಮಟ್ಟದ ತನಿಖೆಗೆ ಆದೇಶ: ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ. ನಮ್ಮ ಹೆಣ್ಣುಮಕ್ಕಳು ನಮ್ಮ ಹೆಮ್ಮೆ. ಆದರೆ ಚಂಡೀಗಢದ ಘಟನೆ ವಿಷಾದನೀಯವಾಗಿದೆ. ಘಟನೆ ಬಗ್ಗೆ ಉನ್ನತಮಟ್ಟದ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ನಾನು ನಿರಂತರವಾಗಿ ಆಡಳಿತಾಧಿಕಾರಿಗಳ ಸಂಪರ್ಕದಲ್ಲಿ ಇರುತ್ತೇನೆ. ಹಾಗಾಗಿ ವದಂತಿಗಳನ್ನು ತಪ್ಪಿಸುವಂತೆ ಮನವಿ ಮಾಡುತ್ತೇನೆ ಎಂದು ಕೋರಿದ್ದಾರೆ.

ಇದು ನಾಚಿಗೇಡಿನ ಸಂಗತಿ: ಚಂಡೀಗಢ ಘಟನೆಯ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಇದು ಅತ್ಯಂತ ನಾಚಿಗೇಡಿನ ಸಂಗತಿ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇದರಲ್ಲಿ ಭಾಗಿಯಾಗಿರುವ ಎಲ್ಲ ಅಪರಾಧಿಗಳಿಗೂ ಕಠಿಣ ಶಿಕ್ಷೆಯಾಗಬೇಕು. ಸಂತ್ರಸ್ತ ಹೆಣ್ಣುಮಕ್ಕಳಿಗೆ ಧೈರ್ಯವಿದೆ. ಅವರು ಯಾವುದಕ್ಕೂ ಹೆದರಬೇಕಿಲ್ಲ. ನಾವು ಅವರೊಂದಿಗೆ ಇದ್ದೇವೆ ಎಂದು ಟ್ವೀಟ್ ಮೂಲಕ ಭರವಸೆಯ ನುಡಿಗಳನ್ನಾಡಿದ್ದಾರೆ.

ಆಕೆ ವೀಡಿಯೋ ರೆಕಾರ್ಡ್ ಮಾಡಿಲ್ಲ: ಈವರೆಗೆ ನಡೆದ ತನಿಖೆಯಲ್ಲಿ ಆರೋಪಿಯ ಒಂದು ವೀಡಿಯೋ ಮಾತ್ರ ಇದೆ. ಆಕೆ ಬೇರೆಯವರ ಯಾವುದೇ ವೀಡಿಯೋಗಳನ್ನ ರೆಕಾರ್ಡ್ ಮಾಡಿಲ್ಲ. ಈಗಾಗಲೇ ಎಲ್ಲಾ ಇಲೆಕ್ಟ್ರಾನಿಕ್ ಸಾಧನಗಳು ಹಾಗೂ ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಶೀಘ್ರದಲ್ಲೇ ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಿದ್ದೇವೆ. ಸದ್ಯ ಈವರೆಗೆ ಸಾವು-ನೋವುಗಳಾಗಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ. ಆದರೆ ಆಂಬುಲೆನ್ಸ್ನಲ್ಲಿ ಕರೆದೊಯ್ಯಲಾದ ಓರ್ವ ವಿದ್ಯಾರ್ಥಿನಿ ಆತಂಕದಲ್ಲಿದ್ದು, ನಮ್ಮ ತಂಡವು ಆಕೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಹಾಗಾಗಿ ಯಾರೂ ವದಂತಿಗಳಿಗೆ ಕಿವಿಗೊಡಬಾರದು ಎಂದು ಮೊಹಾಲಿ ಪೊಲೀಸ್ ಮುಖ್ಯಸ್ಥ ವಿವೇಕ್ ಸೋನಿ ಮನವಿ ಮಾಡಿದ್ದಾರೆ.

Live Tv

Leave a Reply

Your email address will not be published.

Back to top button