ಬೆಂಗಳೂರು: 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಮರುದಿನವೇ ತನ್ನ ಮಗುವನ್ನು ಎತ್ತಿಕೊಂಡು ಬಂದು ಪರೀಕ್ಷೆ ಬರೆದಿರುವ ಅಪರೂಪದ ಘಟನೆ ಬೆಂಗಳೂರಿನ ಸದಾಶಿವನಗರದಲ್ಲಿ ನಡೆದಿದೆ.
ವಿದ್ಯಾರ್ಥಿನಿ ಹರ್ಷಿತಾ ಎಸ್.ಆರ್ (20) ಗುರುವಾರ ಮಧ್ಯಾಹ್ನ ಮಗುವಿನೊಂದಿಗೆ ಬಂದು ಪರೀಕ್ಷೆ ಬರೆದಿದ್ದಾಳೆ. ಈಕೆ ಬೆಂಗಳೂರಿನ ಎಚ್.ಕೆ.ಇ.ಎಸ್. ವೀರೇಂದ್ರ ಪಾಟೀಲ್ ಡಿಗ್ರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ಪದವಿಯನ್ನ ವ್ಯಾಸಂಗ ಮಾಡುತ್ತಿದ್ದಳು. ಮಂಗಳವಾರವೇ ಆಕೆಗೆ ಹೆರಿಗೆ ನೋವು ಸ್ವಲ್ಪ ಕಾಣಿಸಿಕೊಂಡಿದೆ. ಆದರೂ ನೋವಿನಲ್ಲೇ ಪರೀಕ್ಷೆ ಬರೆದಿದ್ದಾಳೆ.
Advertisement
Advertisement
ಬುಧವಾರ ಹರ್ಷಿತಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಒಂದು ಕೈಯಲ್ಲಿ ಮಗುವನ್ನು ಎತ್ತಿಕೊಂಡು ಮತ್ತೊಂದು ಕೈಯಲ್ಲಿ ಪುಸ್ತಕವನ್ನು ಹಿಡಿದುಕೊಂಡು ಗುರುವಾರ ಆಸ್ಪತ್ರೆಯಿಂದ ನೇರವಾಗಿ ಕಾಲೇಜಿಗೆ ಬಂದು ಪರೀಕ್ಷೆಯನ್ನು ಬರೆದಿದ್ದಾಳೆ. ಹರ್ಷಿತಾ ಪರೀಕ್ಷೆ ಬರೆಯುವಾಗ ಪಕ್ಕದ ರೋಮಿನಲ್ಲೇ ಆಕೆಯ ತಾಯಿ ಮಗುವನ್ನು ನೋಡಿಕೊಳ್ಳುತ್ತಿದ್ದರು. ಹರ್ಷಿತಾ ಪ್ರತಿ 30 ನಿಮಿಷಕ್ಕೆ ಹೋಗಿ ಮಗುವಿಗೆ ಹಾಲುಣಿಸಿ ಬರುತ್ತಿದ್ದಳು.
Advertisement
ಈ ಬಗ್ಗೆ ಮಾತನಾಡಿದ ಹರ್ಷಿತಾ, “ನಾನು ಪರೀಕ್ಷೆ ಬರೆಯಲೇಬೇಕು ಎಂದು ನಿರ್ಧರಿಸಿದ್ದೆ. ಒಂದು ವೇಳೆ ಈಗ ಪರೀಕ್ಷೆ ಬರೆಯುವುದನ್ನು ನಾನು ಮಿಸ್ ಮಾಡಿಕೊಂಡಿದ್ದರೆ, ಇನ್ನೊಂದು ವರ್ಷ ನಾನು ಕಾಯಬೇಕಾಗಿತ್ತು. ಹೀಗಾಗಿ ನಾನು ಆಸ್ಪತ್ರೆಯಲ್ಲಿ ಪರೀಕ್ಷೆಗೆಂದು ಓದಿದ್ದೆ. ನನ್ನ ಕುಟುಂಬದವರು ಮತ್ತು ಕಾಲೇಜು ನನಗೆ ಬೆಂಬಲ ನೀಡಿದೆ” ಎಂದು ಸಂತಸದಿಂದ ಹೇಳಿದ್ದಾಳೆ.
Advertisement
ಅಲ್ಲದೆ ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗಲು ಗುರುವಾರ ಮಧ್ಯಾಹ್ನದೊಳಗೆ ಡಿಸ್ಚಾರ್ಜ್ ಮಾಡುವಂತೆ ಹರ್ಷಿತಾ ವೈದ್ಯರಿಗೆ ಮನವಿ ಮಾಡಿಕೊಂಡಿದ್ದಳು. ಅದರಂತೆಯೇ ಕಾಲೇಜು ಸಹ ಹರ್ಷಿತಾಗೆ ಟೀ ಮತ್ತು ಬಿಸ್ಕೆಟ್‍ಗಳನ್ನು ನೀಡಿತ್ತು. ಜೊತೆಗೆ ಪರೀಕ್ಷೆ ಮುಗಿಯುವರೆಗೂ ಆಗಾಗ ವಿಶ್ರಾಂತಿ ಪಡೆದುಕೊಳ್ಳಲು ವಿರಾಮವನ್ನು ನೀಡಲಾಗಿತ್ತು.
ಹರ್ಷಿತಾಗೆ ಮಂಗಳವಾರ ಪರೀಕ್ಷೆ ಬರೆಯಲು ಸಾಧ್ಯವಾಗುತ್ತದೆ ಎಂದು ನಮಗೆ ಖಚಿತವಿರಲಿಲ್ಲ. ಆದರೂ ಆಕೆ ಪರೀಕ್ಷೆ ಬರೆದಳು. ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಹೀಗಾಗಿ ಗುರುವಾರ ಪರೀಕ್ಷೆ ಬರೆಯಲು ಬರುವುದಿಲ್ಲ ಎಂದುಕೊಂಡಿದ್ದೆವು. ಆದರೆ ಆಕೆ ಪರೀಕ್ಷೆ ಬರೆಯಲು ಬರುವ ಮೂಲಕ ನಮ್ಮನ್ನು ಆಶ್ಚರ್ಯಗೊಳಿಸಿದಳು. ಒಬ್ಬ ತಾಯಿ ಮಗುವಿಗೆ ಜನ್ಮ ನೀಡಿದ ಮರುದಿನವೇ 3 ಗಂಟೆ ಬೆಂಚ್ ಮೇಲೆ ಕುಳಿತುಕೊಂಡು ಪರೀಕ್ಷೆ ಬರೆಯುವುದು ಅಷ್ಟು ಸುಲಭವಲ್ಲ. ಅದನ್ನು ಹರ್ಷಿತಾ ಸಾಧಿಸಿ ತೋರಿಸಿದ್ದಾಳೆ. ನಿಜಕ್ಕೂ ಹರ್ಷಿತಾ ಇತರರಿಗೆ ಮಾದರಿಯಾಗಿದ್ದಾಳೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಮ್ಯಾಕ್ವಿಲಿನ್ ಸಿ ಮೋಸೆಸ್ ತಿಳಿಸಿದ್ದಾರೆ.
ಕೆಫೆ ಕಾಫಿ ಡೇ ಮೇಲ್ವಿಚಾರಕರೊಂದಿಗೆ ಹರ್ಷಿತಾ ಮದುವೆಯಾಗಿದ್ದಾಳೆ. ಪದವಿ ಮುಗಿದ ನಂತರ ಸರ್ಕಾರಿ ಕೆಲಸ ಪಡೆಯಬೇಕೆಂಬುದು ಆಕೆಯ ಕನಸು. ಹೀಗಾಗಿ ಡಿಸೆಂಬರ್ 12ಕ್ಕೆ ನಿಗದಿಯಾಗಿರುವ ಮುಂದಿನ ಪರೀಕ್ಷೆಯನ್ನು ಬರೆಯುತ್ತೇನೆ ಎಂದು ಹೇಳಿದ್ದಾಳೆ.