ಹುಬ್ಬಳ್ಳಿ: ನಿರ್ಮಾಣ ಹಂತದ ಶಾಲಾ (School) ಕಟ್ಟಡ ಕುಸಿದು ವಿದ್ಯಾರ್ಥಿಯೊಬ್ಬ (Student) ಮೃತಪಟ್ಟ ದುರ್ಘಟನೆ ಹುಬ್ಬಳ್ಳಿಯ (Hubballi) ಕಿರೇಸೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮೃತ ಬಾಲಕನನ್ನು ವಿಶೃತ್ (9) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಪ್ರಭು ನಾಗಾವಿ ಎಂಬ ಮತ್ತೋರ್ವ ವಿದ್ಯಾರ್ಥಿ ಮೃತನನ್ನು ರಕ್ಷಿಸಲು ಹೋಗಿ ಗಾಯಗೊಂಡಿದ್ದಾನೆ. ಗಾಯಗೊಂಡಿರುವ ಬಾಲಕನಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಬಾಲಕರು ಮುಂಜಾನೆ ಬೇಗ ಶಾಲೆಗೆ ತೆರಳಿದ್ದರು. ಘಟನೆ ವೇಳೆ ಶಾಲೆಯಲ್ಲಿ ಇಬ್ಬರೇ ಇದ್ದರೂ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪ್ರದೀಪ್ ಈಶ್ವರ್ ನಿಮ್ಮೊಂದಿಗೆ- ಶಾಸಕರ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ವಂಚನೆ
ನಿರ್ಮಾಣ ಹಂತದಲ್ಲಿದ್ದ ನೂತನ ಕಟ್ಟಡದ ಬಳಿ ಬಾಲಕರು ಹೋಗಿದ್ದಾರೆ. ಅಲ್ಲಿ ಮೂತ್ರ ವಿರ್ಸಜನೆಗೆ ತೆರಳಿದ್ದಾಗ ಏಕಾಏಕಿ ಗೋಡೆ ಕುಸಿದು ಬಾಲಕರ ಮೇಲೆ ಬಿದ್ದಿದೆ. ಗೋಡೆ ಬಿದ್ದ ರಭಸಕ್ಕೆ ವಿಶೃತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೂ ಸ್ನೇಹಿತನನ್ನು ಕಾಪಾಡಲು ಹೋದ ಪ್ರಭು ಮೇಲೆ ಇಟ್ಟಿಗೆ ಬಿದ್ದು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಯ ಸಾವಿಗೆ ಗುತ್ತಿಗೆದಾರನ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ. ಕಟ್ಟಡ ಕಳಪೆ ಕಾಮಗಾರಿಯಾಗಿದೆ. ಅಲ್ಲದೇ ಕಟ್ಟಡಕ್ಕೆ ಭದ್ರತಾ ಸಿಬ್ಬಂದಿ ನೇಮಿಸುವಂತೆ ಶಾಲಾ ಆಡಳಿತ ಮಂಡಳಿ ಹೇಳಿದ್ದರೂ, ಯಾವುದೇ ಕಾವಲುಗಾರರನ್ನು ನೇಮಿಸದೇ ಇರುವುದು ಈ ಅವಘಡಕ್ಕೆ ಕಾರಣ ಎಂದು ಆರೋಪಿಸಲಾಗುತ್ತಿದೆ.
ಮೃತ ವಿಶೃತ್ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿ, ಇಂತಹ ವಿದ್ಯಾರ್ಥಿಗೆ ದೇವರು ಈ ರೀತಿ ಮೋಸ ಮಾಡತ್ತಾನೆ ಎಂದು ಭಾವಿಸಿರಲಿಲ್ಲ ಎಂದು ಶಿಕ್ಷಕರು ಕಣ್ಣೀರು ಹಾಕಿದ್ದಾರೆ. ಘಟನೆ ಬಗ್ಗೆ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರಕ್ಕೆ ಮನವಿ ಮಾಡಲಾಗುತ್ತದೆ. ಜೊತೆಗೆ ಗುತ್ತಿಗೆದಾರನ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತಾರಕಕ್ಕೇರಿದ ಅಕ್ಕಿ ರಾಜಕೀಯ, ಬಿಜೆಪಿ ನಾಯಕರಿಗೆ ಸಾಕ್ಷಿ ಸಮೇತ ಸಿದ್ದು ತಿರುಗೇಟು