ಧಾರವಾಡ: ರಸ್ತೆ ದಾಟುವಾಗ ಮಹಾರಾಷ್ಟ್ರ ಮೂಲದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಕರೇಪ್ಪ ನಾಯ್ಕರ(18) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ವಿದ್ಯಾರ್ಥಿ. ಈ ಘಟನೆ ನಡೆದ ನಂತರ ಮುಮ್ಮಿಗಟ್ಟಿ ಗ್ರಾಮಸ್ಥರು ಟಯರಿಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಘಟನೆಯ ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗ್ರಾಮಸ್ಥರ ಹಾಗೂ ಮೃತ ವಿದ್ಯಾರ್ಥಿಯ ಕುಟುಂಬದ ಸದಸ್ಯರ ಮನವೊಲಿಸಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಆದಾದ ನಂತರ ಪೊಲೀಸರು ರಸ್ತೆ ತೆರವು ಮಾಡಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ಯ ಈ ಬಗ್ಗೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.