ಬೆಂಗಳೂರು: ಬರ್ತ್ ಡೇ ಪಾರ್ಟಿ ಮುಗಿಸಿ, ಕುಡಿತದ ಅಮಲಿನಲ್ಲೇ ಬೈಕ್ ಚಲಾಯಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ನಗರದ ಉತ್ತರಹಳ್ಳಿಯ ಚನ್ನಸಂದ್ರದ ಬಳಿ ನಡೆದಿದೆ.
ಶಿವಶಂಕರ್ ಚೌದರಿ ಮೃತ ವಿದ್ಯಾರ್ಥಿ. ಭಾನುವಾರ ಮೃತ ಶಿವಶಂಕರ್ ತನ್ನ ಹುಟ್ಟುಹಬ್ಬದ ನಿಮಿತ್ತ ಬೊಮ್ಮನಹಳ್ಳಿಯಲ್ಲಿರುವ ಸ್ನೇಹಿತನ ಮನೆಗೆ ತೆರಳಿದ್ದ. ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಉತ್ತರಹಳ್ಳಿಯ ಚನ್ನಸಂದ್ರದ ಬಳಿ ಬೈಕಿನ ನಿಯಂತ್ರಣ ತಪ್ಪಿ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಶಿವಶಂಕರ್ ಕುಡಿದ ಮತ್ತಿನಲ್ಲೇ ವೇಗವಾಗಿ ಬೈಕ್ ಚಲಾಯಿಸಿದ್ದ. ತಲೆಗೆ ಹೆಲ್ಮೆಟ್ ಕೂಡ ಹಾಕಿರಲಿಲ್ಲ. ಬಿದ್ದ ರಭಸಕ್ಕೆ ತಲೆಗೆ ಗಂಭೀರವಾಗಿ ಪೆಟ್ಟಾದ ಕಾರಣ ಸ್ಥಳದಲ್ಲೇ ಅಸುನೀಗಿದ್ದಾನೆ.
ಶಿವಶಂಕರ್ ಮೂಲತಃ ಜಾರ್ಖಂಡ್ ರಾಜ್ಯದ ರಾಂಚಿ ಜಿಲ್ಲೆಯವನಾಗಿದ್ದಾನೆ. ವಿದ್ಯಾಭ್ಯಾಸ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ. ಕಳೆದ ಮೂರು ವರ್ಷಗಳಿಂದ ಅಪಾರ್ಟ್ ಮೆಂಟ್‍ನಲ್ಲಿ ನೆಲೆಸಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್.ಆರ್.ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv