ಚೆನ್ನೈ: ರಷ್ಯಾ-ಉಕ್ರೇನ್ ನಡುವಿನ ಸಂಘರ್ಷ ಅಂತ್ಯವಾಗುವ ಲಕ್ಷಣ ಕಾಣಿಸುತ್ತಿಲ್ಲ. ಈ ಮಧ್ಯೆ ವಿದ್ಯಾಭ್ಯಾಸಕ್ಕಾಗಿ ಭಾರತದಿಂದ ತೆರಳಿರುವ ವಿದ್ಯಾರ್ಥಿಗಳು ವಾಪಸ್ ತಾಯ್ನಾಡಿಗೆ ಬರಲು ಹರಸಾಹಸ ಪಡುತ್ತಿದ್ದಾರೆ. ಇನ್ನೂ ಕೆಲವು ವಿದ್ಯಾರ್ಥಿಗಳು ತಾವು ಇಷ್ಟಪಟ್ಟು ಸಾಕಿರುವ ಶ್ವಾನಗಳನ್ನು ಕೂಡ ತಮ್ಮ ಜೊತೆ ಕರೆದುಕೊಂಡು ಬರಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಚೆನ್ನೈನ ವಿದ್ಯಾರ್ಥಿನಿಯೊಬ್ಬಳು ತನ್ನ ಸಾಕು ನಾಯಿಯೊಂದಿಗೆ ವಾಪಸ್ಸಾಗಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಕೀರ್ತನಾ, ಸಾಕುಪ್ರಾಣಿಯನ್ನು ತರಲು ಅವಕಾಶ ನೀಡದ ಕಾರಣ ನಾನು ನಾಲ್ಕು ಬಾರಿ ವಿಮಾನ ರದ್ದುಗೊಳಿಸಬೇಕಾಯಿತು. ನಾನು ಎರಡು-ಮೂರು ದಿನಗಳವರೆಗೆ ಕಾದಿದ್ದೆ. ಕೊನೆಗೂ ರಾಯಭಾರ ಕಚೇರಿಯಿಂದ ನನಗೆ ಕರೆ ಬಂತು. ಅವರು ನನ್ನೊಂದಿಗೆ ಸಾಕುಪ್ರಾಣಿಯನ್ನು ಕರೆದೊಯ್ಯಲು ಅವಕಾಶ ನೀಡಿದರು ಎಂದು ತಿಳಿಸಿದರು. ಇದನ್ನೂ ಓದಿ: ಪರಮಾಣು ಘಟಕ ನಾಶಕ್ಕೆ ಉಕ್ರೇನ್ ಅಧ್ಯಕ್ಷರಿಂದ ರಷ್ಯಾ ಪ್ರಚೋದನೆ: ಉಕ್ರೇನ್ ಮಾಜಿ ಪಿಎಂ ಆರೋಪ
ವಿಶೇಷ ಎಂದರೆ ಎರಡು ವರ್ಷದ ಪೆಕಿಂಗೀಸ್ ತಳಿಯ ನಾಯಿಮರಿ ಕ್ಯಾಂಡಿಯನ್ನು ತರುವುದಕ್ಕಾಗಿ ಕೀರ್ತನಾ ತಮ್ಮ ಲಗೇಜ್ ಗಳನ್ನು ಉಕ್ರೇನ್‍ನಲ್ಲಿಯೇ ಬಿಟ್ಟುಬಂದಿದ್ದಾರೆ. ಯಾಕೆಂದರೆ ನಾಯಿಮರಿ ಬೇಕಾದರೆ ಲಗೇಜ್ ಬಿಟ್ಟು ಬರಬೇಕಾಗಿತ್ತು. ಹೀಗಾಗಿ ಅಧಿಕಾರಿಗಳ ಷರತ್ತಿಗೆ ಒಪ್ಪಿದೆ. ನನಗೆ ಲಗೇಜ್‍ಗಿಂತ ನನ್ನ ಸಾಕುಪ್ರಾಣಿ ಮುಖ್ಯ ಎಂದು ಅದನ್ನೇ ಚೆನ್ನೈಗೆ ತಂದಿರುವೆ ಎಂದು ಕೀರ್ತನಾ ಹೇಳಿದರು. ಇದನ್ನೂ ಓದಿ: ನಿವಾಸದ ಮೇಲೆ ದಾಳಿ – ಉಕ್ರೇನ್ ಅಧ್ಯಕ್ಷ ಎಲ್ಲಿ ಅವಿತಿದ್ದಾರೆ?
ಕೀರ್ತನಾ ತಮಿಳುನಾಡಿನ ಮೈಲಾಡುತುರೈ ನಿವಾಸಿಯಾಗಿದ್ದು, ಉಕ್ರೇನ್‍ನ ಉಜ್ಹೋರೋಡ್ ನ್ಯಾಷನಲ್ ಯುನಿವರ್ಸಿಟಿಯಲ್ಲಿ 5ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ. ಈ ಹಿಂದೆ ಕೀರ್ತನಾ ಅವರು, ಕ್ಯಾಂಡಿಯನ್ನು ಬಿಟ್ಟು ಬರಲು ಒಪ್ಪಿರಲಿಲ್ಲ. ಇದೀಗ ಭಾರತೀಯ ರಾಯಭಾರ ಕಚೇರಿಯು ಕ್ಯಾಂಡಿಯನ್ನು ಕರೆದೊಯ್ಯಲು ಅವಕಾಶ ನೀಡುವವರೆಗೆ ತಾನು ತಯ್ನಾಡಿಗೆ ತೆರಳಲ್ಲ ಎಂದು ಪಟ್ಟು ಹಿಡಿದಿದ್ದರು.
ಇತ್ತ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ‘ಆಪರೇಷನ್ ಗಂಗಾ’ ಭಾಗವಾಗಿ ಸರ್ಕಾರವು ಹಲವಾರು ವಿಶೇಷ ವಿಮಾನಯಾನ ಸಂಸ್ಥೆಗಳನ್ನು ಸೇವೆಗೆ ನಿಯೋಜಿಸಿವೆ. ಅಂತೆಯೇ ಶನಿವಾರ ಕೀರ್ತನಾ ‘ಕ್ಯಾಂಡಿ’ ಜೊತೆಗೆ ಚೆನ್ನೈ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಆ ವೇಳೆ ತಮ್ಮ ಕುಟುಂಬ ಸದಸ್ಯರಿಂದ ಭಾವನಾತ್ಮಕ ಸ್ವಾಗತ ಪಡೆದರು.