ಬೆಂಗಳೂರು: ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.
8ನೇ ತರಗತಿ ಓದುತ್ತಿದ್ದ ರಾಣಿ ಎಂಬಾಕೆ ಮೂರು ದಿನದ ಹಿಂದೆ ಸುಭಾಷ್ ನಗರದಿಂದ ನಾಪತ್ತೆಯಾಗಿದ್ದಳು. ಆದ್ರೆ ಶನಿವಾರ ಹೊಸರೋಡ್ ಜಂಕ್ಷನ್ ಬಳಿಯ ಬಸವಾಪುರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ವಿದ್ಯಾರ್ಥಿನಿಯ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.
ರಾಣಿಯ ಪೋಷಕರು ಮೂರು ದಿನಗಳ ಹಿಂದೆಯೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು. ಆದರೆ ಶನಿವಾರ ರಾಣಿ ವಿದ್ಯಾರ್ಥಿನಿಯು ಶಾಲಾ ಸಮವಸ್ತ್ರದಲ್ಲೇ ಶವವಾಗಿ ಪತ್ತೆಯಾಗಿದ್ದಾಳೆ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ನೀಡಿ ಶವವನ್ನು ಕೆರೆಯಿಂದ ಹೊರ ತೆಗೆದು ಶವ ಪರೀಕ್ಷೆಗಾಗಿ ನಗರದ ವಿಕ್ಟೋರಿಯ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.
ವಿದ್ಯಾರ್ಥಿನಿಯ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದ್ದು, ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.