ಹೈದರಾಬಾದ್: ಇಲ್ಲಿನ (Hyderabad) ಹೋಟೆಲ್ ಒಂದರಲ್ಲಿ ಸ್ನೇಹಿತನ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಯೊಬ್ಬ (Student) ನಾಯಿಯೊಂದಿಗೆ (Dog) ತಮಾಷೆ ಮಾಡಲು ಹೋಗಿ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ.
ಮೃತ ಯುವಕನನ್ನು ಉದಯ್ ಕುಮಾರ್ (24) ಎಂದು ಗುರುತಿಸಲಾಗಿದೆ. ಆತ ಸ್ನೇಹಿತನ ಹುಟ್ಟುಹಬ್ಬದ ಆಚರಣೆಗಾಗಿ ಹೋಟೆಲ್‌ಗೆ ತೆರಳಿದ್ದ. ಈ ವೇಳೆ ಹೋಟೆಲ್‌ನ ಕಾರಿಡಾರ್‌ನಲ್ಲಿದ್ದ ನಾಯಿಯನ್ನು ನೋಡಿ ಅದನ್ನು ಅಟ್ಟಿಸಿಕೊಂಡು ಹೋಗಿದ್ದಾನೆ. ಈ ವೇಳೆ ನಾಯಿಯೂ ಓಡಿ ಹೋಗಿ ಬಲಕ್ಕೆ ತಿರುಗಿದೆ. ಆದರೆ ಉದಯ್ ವೇಗವಾಗಿ ಓಡಿ ಬಂದು, ವೇಗವನ್ನು ನಿಯಂತ್ರಿಸಲಾಗದೇ ಕಿಟಕಿಯಿಂದ ಕೆಳಕ್ಕೆ ಬಿದ್ದಿದ್ದಾನೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಗಳಲ್ಲಿ ಉದಯ್ ತಮಾಷೆಗಾಗಿ ನಾಯಿಯನ್ನು ಕಾರಿಡಾರ್‌ನಲ್ಲಿ ಅಟ್ಟಿಸಿಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ಈ ಸಂಬಂಧ ಚಂದಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೋಟೆಲ್‌ನ ಮೂರನೇ ಮಹಡಿಗೆ ನಾಯಿ ಹೇಗೆ ಬಂದಿದೆ ಎಂಬುದು ಸ್ಪಷ್ಟವಾಗಿಲ್ಲ. ಈ ಸಂಬಂಧ ಹೋಟೆಲ್ ಆಡಳಿತ ಮಂಡಳಿ ಮತ್ತು ಉದ್ಯೋಗಿಗಳ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.