ಚಿಕ್ಕಬಳ್ಳಾಪುರ: ಪೊಲೀಸ್ ಪೇದೆಯೊಬ್ಬ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಘಟನೆ ಗೌರಿಬಿದನೂರು ನಗರ ಹೊರವಲಯದ ಮಾದನಾಯಕನಹಳ್ಳಿ ಬಳಿಯಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯದಲ್ಲಿ ನಡೆದಿದೆ.
ಗೌರಿಬಿದನೂರು ಪುರ ಪೊಲೀಸ್ ಠಾಣೆಯ ಪೇದೆ ಶ್ರೀನಿವಾಸ್, ವಿದ್ಯಾರ್ಥಿ ಗಂಗರಾಜು ಮೇಲೆ ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಾಸ್ಟೆಲ್ ಹತ್ತಿರದಲ್ಲೇ ಇರುವ ಪೊಲೀಸ್ ಕ್ವಾರ್ಟಸ್ ನಲ್ಲಿದ್ದ ಶ್ರೀನಿವಾಸ್, ಪ್ರತಿ ದಿನ ರಾತ್ರಿ ವೇಳೆ ಹಾಸ್ಟೆಲ್ ಗೆ ವಿಸಿಟ್ ಮಾಡಿ ಹೊರಗಿನವರು ಬಂದಿದ್ದರೆ ಬೈದು ಕಳಿಹಿಸುವ ಕೆಲಸ ಮಾಡುತ್ತಿದ್ದನಂತೆ. ಅದೇ ರೀತಿ ಭಾನುವಾರವೂ ತಡರಾತ್ರಿ ಹಾಸ್ಟೆಲ್ ಗೆ ಹೋಗಿದ್ದು ಬಾಗಿಲು ತೆಗೆಯುವಂತೆ ಪೇದೆ ಶ್ರೀನಿವಾಸ್ ಜೋರಾಗಿ ಬಾಗಿಲು ಬಡಿದಿದ್ದಾನೆ.
ಇದರಿಂದ ಬೇಸರಗೊಂಡ ವಿದ್ಯಾರ್ಥಿ ಗಂಗರಾಜು ನಮಗೆ ಎಕ್ಸಾಂ ಇದೆ ಓದ್ಕೋಬೇಕು ಡಿಸ್ಟರ್ಬ್ ಮಾಡಬೇಡಿ ಅಂದಿದ್ದಾನೆ. ಇದರಿಂದ ಕೆರಳಿದ ಶ್ರೀನಿವಾಸ್ ಹಾಗೂ ವಿದ್ಯಾರ್ಥಿ ಗಂಗರಾಜು ನಡುವೆ ವಾಗ್ವಾದ ನಡೆದು ಗಲಾಟೆ ನಡೆದಿದೆ. ಈ ವೇಳೆ ಪೇದೆ ಶ್ರೀನಿವಾಸ್ ಗಂಗರಾಜು ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ ಎಂದು ವಿದ್ಯಾರ್ಥಿಗಳು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
ಈ ಸಂಬಂಧ ಹಾಸ್ಟೆಲ್ ವಾರ್ಡನ್ ಅಂಜಿನಪ್ಪ ಸಹ ಪೊಲೀಸರಿಗೆ ವರದಿ ನೀಡಲು ಮುಂದಾಗಿದ್ದಾರೆ. ಸದ್ಯ ಗೌರಿಬಿದನೂರು ವೃತ್ತ ನಿರೀಕ್ಷಕ ಅಮರನಾರಾಯಣರೆಡ್ಡಿ ಅವರು ಪೊಲೀಸ್ ಪೇದೆ ಹಾಗೂ ವಿದ್ಯಾರ್ಥಿ ಗಂಗರಾಜು ನನ್ನ ವಿಚಾರಣೆಗೊಳಪಡಿಸಿದ್ದಾರೆ.