ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡದ ಮುಂಚೂಣಿ ಆಟಗಾರನಾಗಿ 15 ವರ್ಷಗಳ ಕಾಲಗಳಲ್ಲಿ 2 ಬಾರಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಗೆಲ್ಲಿಸಿಕೊಟ್ಟ ವೇಗದ ಬೌಲರ್ ವಿನಯ್ ಕುಮಾರ್ ಇತ್ತೀಚೆಗೆ ರಾಜ್ಯ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ್ದರು. ಈ ಬೆನ್ನಲ್ಲೇ ಕನ್ನಡಿಗ ಸ್ಟುವರ್ಟ್ ಬಿನ್ನಿ ಕರ್ನಾಟಕ ತಂಡವನ್ನು ಬಿಟ್ಟು ನಾಗಾಲ್ಯಾಂಡ್ ತಂಡವನ್ನು ಸೇರಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.
ಸ್ಟುವರ್ಟ್ ಬಿನ್ನಿ ಈಗಾಗಲೇ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಆಕ್ಷೇಪಣೆ ಇಲ್ಲವೆಂದು NOC (non objection certificate) ಪ್ರಮಾಣಪತ್ರ ಪಡೆದಿದ್ದಾರೆ. ದೇಶಿ ಕ್ರಿಕೆಟ್‍ನಲ್ಲಿ ನಾಗಾಲ್ಯಾಂಡ್ ಅತೀ ಕಡಿಮೆ ಅನುಭವ ಹೊಂದಿರುವ ತಂಡವಾಗಿದೆ. ಹೀಗಾಗಿ ಬೇರೆ ರಾಜ್ಯದ ಅನುಭವಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ, ಕಿರಿಯರಿಗೆ ಮಾರ್ಗದರ್ಶನದ ಜೊತೆಯಲ್ಲಿ ತಂಡವನ್ನು ಬೆಳೆಸುವ ಗುರಿಯನ್ನು ನಾಗಾಲ್ಯಾಂಡ್ ಕ್ರಿಕೆಟ್ ಸಂಸ್ಥೆ ಹೊಂದಿದೆ.
ಶೀಘ್ರದಲ್ಲಿಯೇ ನಾಗಾಲ್ಯಾಂಡ್ ತಂಡವನ್ನ ಸೇರಿಕೊಳ್ಳಲಿರುವ ಬಿನ್ನಿ, ಪ್ರಸಕ್ತ ಆವೃತ್ತಿಯಲ್ಲಿ ನಾಗಾಲ್ಯಾಂಡ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಬಿನ್ನಿ ಅವರ ಜೊತೆಗೆ ಮಹಾರಾಷ್ಟ್ರದಿಂದ ಯೋಗೇಶ್ ಟಕವಾಲೆ ಹಾಗೂ ಶ್ರೀಕಾಂತ್ ಮುಂಡೆ ನಾಗಾಲ್ಯಾಂಡ್ ತಂಡ ಸೇರಿಕೊಳ್ಳಲಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ನಾಗಾಲ್ಯಾಂಡ್ ಕ್ರಿಕೆಟ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಎ.ರಹಮಾನ್ ಅವರು, ನಮ್ಮ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ಅನುಭವಿಗಳನ್ನು ಕರೆತರುವ ಉದ್ದೇಶ ಹೊಂದಿದ್ದೆವು. ಈ ನಿಟ್ಟಿನಲ್ಲಿ ಸ್ಟುವರ್ಟ್ ಬಿನ್ನಿ ಅವರ ಕೂಡ ನಮ್ಮ ತಂಡ ಸೇರಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದ್ದಾರೆ.