ಶಿವಮೊಗ್ಗ: ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಬೇಕೆಂದು ಆಗ್ರಹಿಸಿ, ಶಿವಮೊಗ್ಗ ಜಿಲ್ಲೆಯಿಂದ ಹೋರಾಟ ಆರಂಭಿಸಲಾಗುವುದು ಎಂದು ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸಿ ಎಂದು ಜೂನ್ 22 ರಂದು ಸಿಎಂ ಬೊಮ್ಮಾಯಿ ಅವರ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದಾಗ ಶಾಸಕ ಯತ್ನಾಳ್ ಮತ್ತು ಸಚಿವ ಸಿ.ಸಿ ಪಾಟೀಲ್ ಸಿಎಂ ಎದುರು ಸಂಧಾನ ನಡೆಸಿ ಸಮಯಾವಕಾಶ ಕೇಳಿದ್ದರು. ಅದರಂತೆ ಆ.22 ರಂದು ಸರ್ಕಾರಕ್ಕೆ ನೀಡಿದ ಗಡುವು ಮುಕ್ತಾಯಗೊಳ್ಳಲಿದೆ, ಅಲ್ಲಿಯವರೆಗೆ ಸುಮ್ಮನೆ ಕೂರೋದು ಬೇಡವೆಂದು ಜ್ಞಾಪಕ ಪತ್ರ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನ- ಎಲ್ಲರ ಮನೆ ಮೇಲೆ ತಿರಂಗಾ ಹಾರಿಸುವಂತೆ ಸಿಎಂ ಮನವಿ
ಆ.24ರಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ಶಿವಪ್ಪನಾಯಕ ವೃತ್ತದಿಂದ ವಿನೋಬಾನಗರದಲ್ಲಿರುವ ಬಿ.ಎಸ್.ಯಡಿಯೂರಪ್ಪ ಅವರ ಮನೆಯವರೆಗೆ ಎಚ್ಚರಿಕೆಯ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿದೆ. ಅಂದು ಬಿಎಸ್‌ವೈ ಮನೆಗೆ ತೆರಳಿ ಜ್ಞಾಪನಾಪತ್ರ ನೀಡಲಾಗುವುದು. ಒಂದು ವೇಳೆ ಬಿಎಸ್‌ವೈ ಊರಲ್ಲಿ ಇಲ್ಲವೆಂದರೆ ಸಂಸದ ರಾಘವೇಂದ್ರ ಅವರಿಗೆ ನೀಡುತ್ತೇವೆ. ಅವರೂ ಇಲ್ಲವೆಂದರೆ ಜಿಲ್ಲಾಧಿಕಾರಿಗಳಿಗೆ ನೀಡಲಿದ್ದೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣ – ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಳಿನಿ
ಜ್ಞಾಪಕ ಪತ್ರ ಮೆರವಣಿಗೆಯ ಭಾಗವಾಗಿ ಪ್ರತಿ ತಾಲೂಕಿನಲ್ಲಿ ಪ್ರತಿಜ್ಞಾ ಪಂಚಾಯಿತಿ ನಡೆಸಲಾಗುತ್ತಿದೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸಲಿದೆ. ನಮಗೆ ಮೀಸಲಾತಿ ದೊರೆಯುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.