ಅಮೆರಿಕದಲ್ಲಿ ಟ್ರಂಪ್ ಮತ್ತೊಮ್ಮೆ ಅಧಿಕಾರ ಸ್ವೀಕರಿಸುತ್ತಿದ್ದಂತೆ ಕಠಿಣ ವಲಸೆ ನಿಯಮ ಜಾರಿಗೆ ತಂದ ಬೆನ್ನಲ್ಲೇ, ಭಾರತ ಸಹ ಕಠಿಣ ವಲಸೆ ನಿಯಮ ಜಾರಿಗೆ ತರಲು ಮುಂದಾಗಿದೆ. ಮಾ.10 ರಂದು ನಡೆಯಲಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಲಸೆ ಮತ್ತು ಅಕ್ರಮ ವಿದೇಶಿ ವಲಸಿಗರ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ.
ಭಾರತದಲ್ಲಿ ಪಾಸ್‌ಪೋರ್ಟ್ ಕಾಯ್ದೆ 1920, ವಿದೇಶಿಯರ ನೋಂದಣಿ ಕಾಯ್ದೆ 1939, ವಿದೇಶಿಯರ ಕಾಯ್ದೆ 1946 ಮತ್ತು ವಲಸೆ (ವಾಹಕಗಳ ಹೊಣೆಗಾರಿಕೆ) ಕಾಯ್ದೆ 2000, ಇವು ಪ್ರಸ್ತುತ ಭಾರತದಲ್ಲಿ ವಿದೇಶಿಯರಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ನಿಯಂತ್ರಿಸುತ್ತವೆ. ಪ್ರಸ್ತಾವಿತ ಕಾಯ್ದೆಯು ಅಸ್ತಿತ್ವದಲ್ಲಿರುವ 4 ಕಾನೂನುಗಳನ್ನು ರದ್ದುಗೊಳಿಸಿ, ನೂತನ ಕಾನೂನು ಜಾರಿಗೆ ಬರಲಿದೆ.
Advertisement
Advertisement
ಮಸೂದೆ ಏನೆಲ್ಲ ಅಂಶ ಒಳಗೊಂಡಿದೆ?
ಮಸೂದೆಯು 35 ಷರತ್ತುಗಳು ಮತ್ತು ಹಲವಾರು ಕಾನೂನುಗಳನ್ನು ಒಳಗೊಂಡಿರುವ 6 ಅಧ್ಯಾಯಗಳನ್ನು ಹೊಂದಿದೆ. ಇದು ವಲಸೆ ಅಧಿಕಾರಿಯ ಕಾರ್ಯಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ. ಪಾಸ್‌ಪೋರ್ಟ್ ಮತ್ತು ವೀಸಾದ ಅವಶ್ಯಕತೆ, ವಿದೇಶಿಯರಿಗೆ ಮತ್ತು ಅವರ ನೋಂದಣಿಗಳಿಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿದೆ.
Advertisement
ಪ್ರಸ್ತಾವಿತ ಕಾನೂನು ಹೇಳೋದೇನು?
ಭಾರತದ ರಾಷ್ಟ್ರೀಯ ಭದ್ರತೆ, ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಬೆದರಿಕೆ, ವಿದೇಶಿ ರಾಜ್ಯದೊಂದಿಗಿನ ಸಂಬಂಧಗಳು ಅಥವಾ ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಕೇಂದ್ರ ಸರ್ಕಾರ ಸೂಚಿಸಿದ ನಿಯಮದ ಪ್ರಕಾರ ವಿದೇಶಿಯರಿಗೆ ಭಾರತಕ್ಕೆ ಪ್ರವೇಶಿಸಲು ಅಥವಾ ಅಲ್ಲಿ ಉಳಿಯಲು ಅವಕಾಶವಿಲ್ಲದಿದ್ದರೆ ವಲಸೆ ಅಧಿಕಾರಿಯ ನಿರ್ಧಾರ ಅಂತಿಮವಾಗಿರುತ್ತದೆ.
Advertisement
ರಾಷ್ಟ್ರೀಯ ಭದ್ರತಾ ಬೆದರಿಕೆ: ಮಸೂದೆಯು ವಿದೇಶಿಯರು ಭಾರತದ ಅಕ್ರಮ ಪ್ರವೇಶ ಹಾಗೂ ವಾಸ್ತವ್ಯವನ್ನು ನಿರಾಕರಿಸುತ್ತದೆ. ರಾಷ್ಟ್ರೀಯ ಭದ್ರತೆ, ಭಾರತದ ಸಾರ್ವಭೌಮತ್ವ, ಸಮಗ್ರತೆ ಮತ್ತು ಭದ್ರತೆಗೆ ವಿಷಯದ ಷರತ್ತುಗಳನ್ನು ಒಳಗೊಂಡಿದೆ.
ಈ ಹಿಂದೆಯೂ ಸಹ, ವಿದೇಶಿಯರಿಗೆ ಅಕ್ರಮ ಪ್ರವೇಶ, ವಾಸ್ತವ್ಯವನ್ನು ನಿರಾಕರಿಸಲಾಗಿತ್ತು ಆದರೆ ಯಾವುದೇ ಶಾಸನ ಅಥವಾ ನಿಯಮಗಳಲ್ಲಿ ಕಾರಣಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿರಲಿಲ್ಲ.
ವಿಶ್ವವಿದ್ಯಾನಿಲಯಗಳು, ಕಾಲೇಜುಗಳು: ವಿದೇಶಿಯರಿಗೆ ಪ್ರವೇಶ ನೀಡುವ ವಿಶ್ವವಿದ್ಯಾನಿಲಯಗಳು, ಆಸ್ಪತ್ರೆಗಳು ಮತ್ತು ಇತರ ವೈದ್ಯಕೀಯ ಸಂಸ್ಥೆಗಳು ಅವರ ನೋಂದಣಿಯನ್ನು ನಿರ್ದಿಷ್ಟಪಡಿಸುವ ವಿವರಗಳನ್ನು, ಅವರ ಬಗೆಗಿನ ದಾಖಲೆಗಳನ್ನು ವಲಸೆ ಅಧಿಕಾರಿಗಳಿಗೆ ಒದಗಿಸುವುದನ್ನು ನೂತನ ಕಾಯ್ದೆಯಲ್ಲಿ ಕಡ್ಡಾಯಗೊಳಿಸಲಾಗುತ್ತದೆ.
ಆಸ್ಪತ್ರೆ: ಪ್ರತಿಯೊಂದು ಆಸ್ಪತ್ರೆ, ನರ್ಸಿಂಗ್ ಹೋಂ ಅಥವಾ ತಮ್ಮ ಆವರಣದಲ್ಲಿ ವೈದ್ಯಕೀಯ, ವಸತಿ ಅಥವಾ ಉಳಿಯುವ ಸೌಲಭ್ಯವನ್ನು ಒದಗಿಸುವ ಯಾವುದೇ ಇತರ ವೈದ್ಯಕೀಯ ಸಂಸ್ಥೆಯು ಒಳಾಂಗಣ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಯಾವುದೇ ವಿದೇಶಿಯರ ಅಥವಾ ಅಂತಹ ವಸತಿ ಸೌಲಭ್ಯವನ್ನು ಒದಗಿಸಲಾದ ಅವರ ಸಹಾಯಕರ ಕುರಿತು ನೋಂದಣಿ ಅಧಿಕಾರಿಗೆ ಮಾಹಿತಿಯನ್ನು ಒದಗಿಸಬೇಕು.
ಈ ಹಿಂದೆ, ಅಂತಹ ಸಂಸ್ಥೆಗಳಿಗೆ ಯಾವುದೇ ನಿರ್ದಿಷ್ಟ ನಿಯಮಗಳು ಇರಲಿಲ್ಲ. ಪ್ರಸ್ತುತ, ಹೋಟೆಲ್‌ಗಳು ಮತ್ತು ಅತಿಥಿ ಗೃಹಗಳು ವಿದೇಶಿಯರ ಪಾಸ್‌ಪೋರ್ಟ್ ವಿವರಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳುವುದು ಕಡ್ಡಾಯವಾಗಿದೆ. ಇನ್ನೂ ಕಾಯ್ದೆ ಪ್ರಕಾರ ವಿದೇಶಿಗರು ಬಯೋಮೆಟ್ರಿಕ್ ನೋಂದಣಿಗೆ ಒಳಗಾಗುವುದಕ್ಕೆ ನಿಷೇಧವಿದೆ.
ನಿಯಮ ಮೀರಿದರೆ ಶಿಕ್ಷೆ ಏನು?
ಹೊಸ ಮಸೂದೆಯ ಪ್ರಕಾರ, ಪಾಸ್‌ಪೋರ್ಟ್, ದಾಖಲೆಯಿಲ್ಲದೆ ಭಾರತಕ್ಕೆ ಪ್ರವೇಶಿಸುವ ವಿದೇಶಿಯರಿಗೆ ಐದು ವರ್ಷಗಳ ಜೈಲು ಶಿಕ್ಷೆ ಅಥವಾ 5 ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
ನಕಲಿ ಅಥವಾ ವಂಚನೆಯಿಂದ ಪಡೆದ ಪಾಸ್‌ಪೋರ್ಟ್‌ಗಳು ಅಥವಾ ಇತರ ಪ್ರಯಾಣ ದಾಖಲೆಗಳು ಅಥವಾ ವೀಸಾಗಳನ್ನು ಬಳಸುವುದು ಅಥವಾ ಪೂರೈಸುವುದು ಎರಡು ವರ್ಷಗಳಿಗಿಂತ ಕಡಿಮೆಯಿಲ್ಲದ, ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ಗಿಂತ ಕಡಿಮೆಯಿಲ್ಲದ ಆದರೆ 10 ಲಕ್ಷ ರೂ.ಗಳವರೆಗೆ ವಿಸ್ತರಿಸಬಹುದಾದ ದಂಡವನ್ನು ವಿಧಿಸುವ ಸಾಧ್ಯತೆಯಿದೆ. ವೀಸಾ ಮಿತಿಯನ್ನು ಮೀರಿ ಉಳಿದುಕೊಂಡವರಿಗೆ 3 ಲಕ್ಷ ರೂ.ಗಳ ದಂಡದೊಂದಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಲಾಗುತ್ತದೆ.
ಇತ್ತೀಚಿನ ಸರ್ಕಾರಿ ಮಾಹಿತಿಯ ಪ್ರಕಾರ, ಏಪ್ರಿಲ್ 1, 2023 ಮತ್ತು ಮಾರ್ಚ್ 31, 2024ರ ನಡುವೆ ಒಟ್ಟು 98,40,321 ವಿದೇಶಿಯರು ಭಾರತಕ್ಕೆ ಭೇಟಿ ನೀಡಿದ್ದಾರೆ.