ದಕ್ಷಿಣ ಕನ್ನಡದಲ್ಲಿ ಡ್ರಗ್ಸ್ ದಂಧೆ ಕಡಿವಾಣಕ್ಕೆ ಕಠಿಣ ಕಾನೂನು ಕ್ರಮ ಬೇಕಾಗಿದೆ: ಮಂಜುನಾಥ್ ಭಂಡಾರಿ

Public TV
2 Min Read
manjunath bhandary

– ಪರಿಷತ್ ಅಧಿವೇಶನದಲ್ಲಿ ಡ್ರಗ್ಸ್ ದಂಧೆ ಕಡಿವಾಣಕ್ಕೆ ದನಿ ಎತ್ತುತ್ತೇನೆ

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಡ್ರಗ್ಸ್ ದಂಧೆ ಕಡಿವಾಣಕ್ಕೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಈ ಬಾರಿಯ ವಿಧಾನ ಪರಿಷತ್ ಅಧಿವೇಶನದಲ್ಲಿ ದನಿ ಎತ್ತುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಎಂಎಲ್‌ಸಿ ಮಂಜುನಾಥ್ ಭಂಡಾರಿ ತಿಳಿಸಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು, ಡ್ರಗ್ಸ್ ದಂಧೆ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೊಳಿಸಲು ಈ ಬಾರಿಯ ವಿಧಾನ ಪರಿಷತ್ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ. ಡ್ರಗ್ಸ್ ದಂಧೆಯಲ್ಲಿ ತೊಡಗಿದವರನ್ನು ಬಂಧಿಸಿದ್ದರೂ ಅವರು ಜಾಮೀನು ಪಡೆದು ಹೊರಗೆ ಬರುತ್ತಾರೆ. ಮತ್ತೆ ಅದೇ ಡ್ರಗ್ಸ್ ದಂಧೆ ಮಾಡುತ್ತಿರುವುದು ಕಂಡು ಬಂದಿದೆ. ಡ್ರಗ್ಸ್ ದಂಧೆಗೆ ಬಹಳ ಸಣ್ಣ ಕೇಸ್‌ಗಳು ಇರುವುದರಿಂದ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಪೊಲೀಸರು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ಜಾರಿಯಾಗಬೇಕಾದರೆ ಕಾನೂನಿನಲ್ಲಿ ತಿದ್ದುಪಡಿ ಮಾಡಿದ್ದಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು.

ಅವಿಭಜಿತ ದ.ಕ.ಜಿಲ್ಲೆಯಲ್ಲಿನ ಡ್ರಗ್ಸ್ ದಂಧೆಗೆ ಕಡಿವಾಣಕ್ಕೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆದಿದ್ದೆ. ಗೃಹಮಂತ್ರಿ, ಐಜಿ, ಪೊಲೀಸ್ ಕಮಿಷನರ್‌ಗೆ ಪತ್ರ ಬರೆದಿದ್ದೆ. ಡ್ರಗ್ಸ್ ದಂಧೆಯ ಕರಾಳತೆ ಎಷ್ಟರಮಟ್ಟಿಗೆ ಹೋಗಿದೆ ಎಂದರೆ ಇಲ್ಲಿನ ಕಾಲೇಜುಗಳಲ್ಲಿ ಅಡ್ಮಿಷನ್ ಸಂಖ್ಯೆ ಕುಂಠಿತಗೊಳ್ಳುತ್ತಿದೆ. ಡ್ರಗ್ಸ್ ದಂಧೆಯನ್ನು ಡಿಜಿಯವರು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದರು.

ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಉಪ ಚುನಾವಣೆ ನಿನ್ನೆ ನಡೆದಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಡುಪಿಯ ರಾಜು ಪೂಜಾರಿ ಅವರನ್ನು ಕಣಕ್ಕಿಳಿಸಿದೆ. ಕಳೆದ 30 ವರ್ಷಗಳಿಂದ ರಾಜು ಪೂಜಾರಿ ಪಕ್ಷದ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಚುನಾವಣೆಯಲ್ಲಿ ಉಭಯ ಜಿಲ್ಲೆಗಳ 13 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಬೆಂಬಲ ದೊರಕಿದೆ. ಸಂಘಟಿತವಾಗಿ ಚುನಾವಣೆ ಎದುರಿಸಿದ್ದೇವೆ. ಉಡುಪಿ ಜಿಲ್ಲೆಯ ಕೆರಾಡಿ ಮತ್ತು ಜಟ್ಕಲ್ ಗ್ರಾಮ ಪಂಚಾಯತ್ ಸದಸ್ಯರು ಚುನಾವಣೆ ಬಹಿಷ್ಕರಿಸಿದ್ದರು. ಕಸ್ಕೂರಿ ರಂಗನ್ ವರದಿ ಜಾರಿಗೆ ವಿರೋಧಿಸಿ ಚುನಾವಣೆ ಬಹಿಷ್ಕಾರ ನಡೆದಿತ್ತು. ಇದು ಸ್ವಲ್ಪ ಮಟ್ಟಿಗೆ ಕಾಂಗ್ರೆಸ್‌ಗೆ ಹೊಡೆತ ನೀಡಬಹುದು. ಆದರೂ ಕಾಂಗ್ರೆಸ್ ಅಭ್ಯರ್ಥಿ ಭಾರಿ ಅಂತರದಿAದ ಜಯ ಗಳಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

Share This Article