ಮಡಿಕೇರಿ: ಮಾನವ ಹಕ್ಕುಗಳ ಸಂಸ್ಥೆಯ ಅಧ್ಯಕ್ಷ ಎಂದು ಹೇಳಿಕೊಂಡು ಮಹಿಳೆಯರಿಗೆ ಲಕ್ಷಾಂತರ ರೂ. ಟೋಪಿ ಹಾಕಿದ್ದ ಆರೋಪಿಯನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.
ಮಂಜಿನ ನಗರಿ ಮಡಿಕೇರಿಯಲ್ಲಿ ಘಟನೆ ನಡೆದಿದ್ದು, ಬೆಂಗಳೂರಿನ ಹೆಣ್ಣೂರಿನವನಾದ ರಸೂಲ್ ಖಾನ್, ನಾನು ಮಾನವ ಹಕ್ಕುಗಳ ಸಂಸ್ಥೆಯ ಮುಖಂಡ ವ್ಯಾಪಾರ ಮಾಡಲು ನಿಮಗೆ ಸಾಲ ಕೊಡಿಸುತ್ತೇನೆ ಎಂದು ಹೇಳಿಕೊಂಡು ಬೆಂಗಳೂರಿನಿಂದ ಮಡಿಕೇರಿಗೆ ಬಂದಿದ್ದ. ಸಾಲ ಕೊಡಿಸಬೇಕಾದಲ್ಲಿ ನೀವು ಒಂದು ಕಾರ್ಯಕ್ರಮ ಮಾಡಬೇಕು ಎಂದು ಅದ್ಧೂರಿ ಕಾರ್ಯಕ್ರಮ ಮಾಡಿಸಿದ್ದಾನೆ. ಬಳಿಕ ಹತ್ತಾರು ಮಹಿಳೆಯರಿಗೆ ಲಕ್ಷಾಂತರ ರೂ. ಟೋಪಿಹಾಕಿ ಪರಾರಿಯಾಗಿದ್ದ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
Advertisement
ಒಬ್ಬೊಬ್ಬರಿಗೂ ಒಂದುವರೆ ಲಕ್ಷ ರೂ. ಸಾಲ ಕೊಡಿಸುತ್ತೇನೆ ಎಂದು ಬೀದಿ ಬದಿ ವ್ಯಾಪಾರಿಗಳನ್ನು ನಂಬಿಸಿದ್ದಾನೆ. ಅಲ್ಲದೆ ಸಂಸ್ಥೆಗೆ ಜನರನ್ನು ಸದಸ್ಯರನ್ನಾಗಿಸಬೇಕು, ಅದಕ್ಕೂ ಮುನನ್ನ ಮಡಿಕೇರಿ ನಗರದಲ್ಲಿ ಒಂದು ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂದು ಬೀದಿ ಬದಿ ವ್ಯಾಪಾರ ಮಾಡುವ ಮಹಿಳಿಯರಿಗೆ ತಿಳಿಸಿದ್ದಾನೆ. ಇದನ್ನೇ ನಂಬಿದ್ದ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಕುಶಾಲನಗರದ ಮಹಿಳಾ ವ್ಯಾಪಾರಿಗಳು ಮೋಸ ಹೋಗಿದ್ದಾರೆ. 15ಕ್ಕೂ ಹೆಚ್ಚು ಮಹಿಳೆಯರು ಸೇರಿ ಮಡಿಕೇರಿಯಲ್ಲಿ ಕಾರ್ಯಕ್ರಮವನ್ನೂ ಮಾಡಿದ್ದಾರೆ. ಬಳಿಕ ಮಹಿಳೆಯರಿಗೆ ಅನುವಂಶೀಯ ವೈದ್ಯರ ಪರಿಷತ್ತು ಹೆಸರಿನ ಸರ್ಟಿಫಿಕೇಟ್‍ಗಳನ್ನು ವಿತರಣೆ ಮಾಡಿದ್ದಾನೆ.
Advertisement
Advertisement
ಇದನ್ನು ನಂಬಿದ ಮಹಿಳೆಯರು ತಲಾ ಹದಿನೈದು ಸಾವಿರದಂತೆ ಹಣ ನೀಡಿದ್ದಾರೆ. ಹೀಗೆ ಒಬ್ಬೊಬ್ಬರಿಂದಲೂ ಹದಿನೈದು ಸಾವಿರ ರೂ. ಹಣ ಪಡೆದಿದ್ದ ಬಾಬು ಅಲಿಯಾಸ್ ರಸೂಲ್ ಖಾನ್, ಬಳಿಕ ವ್ಯಾಪಾರಿ ಮಹಿಳೆಯರನ್ನು ಬೆಂಗಳೂರಿಗೂ ಕರೆದೊಯ್ದು ಇದೇ ತನ್ನ ಕಚೇರಿ ಎಂದು ಪರಿಚಯಿಸಿದ್ದಾನೆ. ನಂತರ ಹಲವು ದಿನ ಕಳೆದರೂ ಸಾಲ ಕೊಡಿಸುವ ಕುರಿತು ಮಾತನಾಡದಿದ್ದಾಗ ಮಹಿಳೆಯರು ಫೋನ್ ಮಾಡಿ ಪ್ರಶ್ನಿಸಿದ್ದಾರೆ. ಈ ವೇಳೆ ನೀವು ಯಾರು ಅಂತಾನೆ ಗೊತ್ತಿಲ್ಲ. ನೀವು ನನಗೆ ಯಾವುದೇ ಹಣವನ್ನೂ ಕೊಟ್ಟಿಲ್ಲ ಎಂದು ಉಲ್ಟಾ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆಯರು, ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಮಡಿಕೇರಿ ನಗರ ಪೊಲೀಸರು, ಆರೋಪಿ ರಸೂಲ್ ಖಾನ್‍ನನ್ನು ಬಂಧಿಸಿ ಜೈಲಿಗೆ ದಬ್ಬಿದ್ದಾರೆ.