ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿನಾಯಿಗಳ ಹಾವಳಿ ಮುಂದುವರಿದಿದ್ದು, ಹೆಚ್‍ಎಎಲ್‍ನ ವಿಭೂತಿಪುರಂ ಬಳಿ ಬಾಲಕನ ಮೇಲೆ ಎರಗಿದ ನಾಯಿಗಳು ಗಂಭೀರವಾಗಿ ಗಾಯಗೊಳಿಸಿವೆ.
ಹೌದು, ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಶೌಚಾಲಯಕ್ಕೆ ಹೋಗಿದ್ದ ಬಾಲಕನ ಮೇಲೆ 10 ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿ ಗಾಯಗೊಳಿಸಿವೆ. ಆಟ-ಪಾಠ ಕಲಿಯಬೇಕಿದ್ದ ಬಾಲಕನೀಗ ಸಾವು-ಬದುಕಿನ ಮಧ್ಯೆ ಹೋರಾಡುತ್ತಾ ಇದ್ದಾನೆ.
ಪ್ರವೀಣ್ ಬೀದಿನಾಯಿಗಳ ದಾಳಿಗೆ ತುತ್ತಾದ ಬಾಲಕ. ಬುಧವಾರ ಸಂಜೆ ಬಾಲಕ ಶೌಚಾಲಯಕ್ಕೆ ತೆರಳಿದ್ದಾಗ, ಏಕಾಏಕಿ 10 ಕ್ಕೂ ಹೆಚ್ಚು ಬೀದಿನಾಯಿಗಳ ಗುಂಪು ಬಾಲಕನ ಮೇಲೆ ಎರಗಿ, ಕತ್ತು, ಮೈ ಹಾಗೂ ಕೈ ಭಾಗಕ್ಕೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ. ಇದನ್ನು ಕಂಡ ಸ್ಥಳೀಯರು ನಾಯಿಗಳನ್ನು ಓಡಿಸಿ, ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಬಾಲಕನ ಸ್ಥಿತಿಯು ಚಿಂತಾಜನಕವಾಗಿದೆ. ವೈದ್ಯರು ಇನ್ನು ಮೂರು ದಿನಗಳ ಕಾಲ ಏನು ಹೇಳುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ. ಇದರಿಂದ ಬಾಲಕನ ತಾಯಿ ತೀವ್ರವಾಗಿ ಚಿಂತೆಗೀಡಾಗಿದ್ದಾರೆ. ಮಗನ ಚಿಕಿತ್ಸೆಗೆ ಹಣ ಇಲ್ಲದೇ ಪರದಾಡುತ್ತಾ, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ಘಟನೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ಈ ಏರಿಯಾಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದೆ. ಇವುಗಳಿಗೆ ಮೂಲ ಕಾರಣ ವಿಭೂತಿಪುರಂನಲ್ಲಿರುವ ಹೆಚ್ಚಿನ ಮಾಂಸದ ಅಂಗಡಿಗಳು. ಅಂಗಡಿಯವರು ನಾಯಿಗಳಿಗೆ ಮಾಂಸದ ತುಂಡುಗಳನ್ನು ಹಾಕುತ್ತಾರೆ. ಹೀಗಾಗಿ ಇವನ್ನೇ ರೂಢಿ ಮಾಡಿಕೊಂಡಿರುವ ನಾಯಿಗಳು ಜನರ ಮೇಲೂ ದಾಳಿ ನಡೆಸುತ್ತಲೇ ಇರುತ್ತವೆ. ಈ ಬಗ್ಗೆ ಸ್ಥಳೀಯ ಕಾರ್ಪೋರೇಟರ್ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೂ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv