ಮಂಡ್ಯ: ಒಣ ಚರ್ಮ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ವಿಚಿತ್ರ ಹೆಣ್ಣು ಮಗುವೊಂದು ಮಂಡ್ಯ ಮಿಮ್ಸ್ ನಲ್ಲಿ ಮಂಗಳವಾರ ರಾತ್ರಿ ಜನಿಸಿದೆ.
ರಾಮನಗರ ಮೂಲದ ದಂಪತಿಯ ಮೊದಲ ಮಗು ಇದಾಗಿದ್ದು, ಹೆರಿಗೆಗಾಗಿ ಮಿಮ್ಸ್ ಗೆ ಗರ್ಭಿಣಿಯನ್ನು ದಾಖಲಿಸಲಾಗಿತ್ತು. ರಾತ್ರಿ ಡಾ.ಗೀತಾ ಹೆರಿಗೆ ಮಾಡಿಸಿದ್ದು, ಈ ವಿಚಿತ್ರ ಮಗು ಜನನವಾಗಿದೆ. ಮಗುವಿನ ದೇಹದ ಚರ್ಮವು ತೀರ ದಪ್ಪವಾಗಿದ್ದು, ಒಣಗಿದಂತಿದೆ. ಹೀಗಾಗಿ ಅಲ್ಲಲ್ಲಿ ದೇಹದ ಮೈಮೇಲಿನ ಚರ್ಮವು ಬಿರುಕು ಬಿಟ್ಟಿದೆ. ಬಿರುಕು ಬಿಟ್ಟಿದ್ದರಿಂದ ಮೈಮೇಲೆ ರಕ್ತ ಚೆಲ್ಲಿದಂತೆ ಕಾಣುತ್ತಿದೆ. ಸದ್ಯಕ್ಕೆ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
Advertisement
ವಂಶಪಾರಂಪರ್ಯ ಕಾಯಿಲೆಗೆ ಒಳಗಾಗಿ ಈ ಮಗು ಜನಿಸಿದೆ. ಎಬಿಸಿಎ 12 ಜೀನ್ ಮ್ಯುಟೇಶನ್ ಕಾರಣದಿಂದ ಮಗುವು ಈ ರೀತಿ ಆದ ವಿಚಿತ್ರ ಒಣಚರ್ಮ ಕಾಯಿಲೆಗೆ ಒಳಗಾಗಿದೆ. ಐದು ಲಕ್ಷದಲ್ಲಿ 1 ಮಗುವಿಗೆ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ ಎಂದು ಚರ್ಮರೋಗ ತಜ್ಞರು ಹಾಗೂ ಮಿಮ್ಸ್ ವೈದ್ಯ ಅಧೀಕ್ಷಕ ಡಾ. ಎಂ.ಆರ್. ಹರೀಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.