ಕಾಮಗಾರಿ ಮುಗಿಯುವವರೆಗೆ ಎಕ್ಸ್‌ಪ್ರೆಸ್‌ವೇ ಟೋಲ್ ಸಂಗ್ರಹ ತಡೆಯಿರಿ – ಸಿಎಂಗೆ ಮಂಡ್ಯ ಶಾಸಕರ ಮನವಿ

Public TV
3 Min Read
Stop collection of expressway toll Mandya MLAs appeal to CM Siddaramaiah

– ಸರ್ವಿಸ್ ರಸ್ತೆ ಸೇರಿ ಹತ್ತಾರು ಕಾಮಗಾರಿಗಳು ಅಪೂರ್ಣ
– ಸೂಕ್ತ ಕ್ರಮವಹಿಸದೇ ಟೋಲ್ ಶುಲ್ಕ ಸರಿಯಲ್ಲ ಎಂದು ಸಿಎಂಗೆ ಮನವಿ
– ಕೇಂದ್ರ ಸರ್ಕಾರದ ಗಮನಕ್ಕೆ ತಂದು ಟೋಲ್ ಸಂಗ್ರಹಕ್ಕೆ ತಡೆ ನೀಡಲು ಮನವಿ

ಬೆಂಗಳೂರು: ದಶಪಥ ಹೆದ್ದಾರಿ ನಡುವೆ ಇರುವ ಶ್ರೀರಂಗಪಟ್ಟಣದಲ್ಲಿ ಟೋಲ್ ಶುಲ್ಕ ವಿಧಿಸಿರುವ ಸಂಬಂಧ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ, ಇದಕ್ಕೆ ತಡೆ ನೀಡಬೇಕು. ಸರ್ವಿಸ್ ರಸ್ತೆಗಳು ಇನ್ನಿತರ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಟೋಲ್ ಸಂಗ್ರಹ ಮಾಡದಂತೆ ತಡೆ ನೀಡಲು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದು ಮಂಡ್ಯ ಶಾಸಕರಾದ ದಿನೇಶ್ ಗೂಳಿಗೌಡ, ರವಿಕುಮಾರ್ ಗಣಿಗ ಹಾಗೂ ರಮೇಶ್ ಬಂಡಿಸಿದ್ದೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಅಪರ ಮುಖ್ಯ ಕಾರ್ಯದರ್ಶಿ ಪಿಡಬ್ಲ್ಯುಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಈಗಾಗಲೇ ಬೆಂಗಳೂರಿನಿಂದ ಹೊರಡಬೇಕಾದರೆ ಅಥವಾ ಮೈಸೂರಿನಿಂದ ಹೊರಡಬೇಕಾದರೆ ಒಂದು ಬಾರಿ ಟೋಲ್ ಶುಲ್ಕವನ್ನು ಕಟ್ಟಿಸಿಕೊಳ್ಳಲಾಗುತ್ತದೆ. ಈಗ ಶ್ರೀರಂಗಪಟ್ಟಣದಲ್ಲಿಯೂ ಟೋಲ್ ಕಟ್ಟಿಸಿಕೊಳ್ಳುತ್ತಿರುವುದು ಸಾರ್ವಜನಿಕರಿಗೆ ಡಬಲ್ ಹೊರೆಯಾಗಲಿದೆ. ಅಲ್ಲದೆ ಇನ್ನೂ ಕಾಮಗಾರಿಗಳೇ ಪೂರ್ಣಗೊಂಡಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಈ ಸಂಬಂಧ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಬೇಕು. ಸರ್ವಿಸ್ ರಸ್ತೆ ಸೇರಿದಂತೆ ಇನ್ನಿತರ ಕಾಮಗಾರಿ ಮುಗಿಯುವವರೆಗೂ ಶ್ರೀರಂಗಪಟ್ಟಣ ಟೋಲ್‌ನಲ್ಲಿ ಶುಲ್ಕವನ್ನು ಸಂಗ್ರಹ ಮಾಡದಂತೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

Bengaluru Mysuru Expressway 6

 

ಮನವಿ ಪತ್ರದಲ್ಲೇನಿದೆ?
ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿಯು ಮಾರ್ಚ್ ತಿಂಗಳಲ್ಲಿ ಲೋಕಾರ್ಪಣೆಗೊಂಡಿದೆ. ಇದರಿಂದ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿಗೆ ಶೀಘ್ರ ಸಂಚಾರಕ್ಕೆ ಅನುಕೂಲವಾಗಿದೆ ಎಂಬ ಅಂಶ ಬಿಟ್ಟರೆ ಇದು ಜನರಿಗೆ ನಿಜಕ್ಕೂ ಜೇಬು ಸುಡುವ ರಹದಾರಿಯಾಗಿದೆ. ಈ ಮಾರ್ಗದಲ್ಲಿ ಜನರು ಟೋಲ್ ಕಟ್ಟಿ ಕಟ್ಟಿ ಬಸವಳಿಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈಗ ಇದ್ದದ್ದು ಸಾಲದೆಂಬಂತೆ ಶ್ರೀರಂಗಪಟ್ಟಣದಲ್ಲಿ ಸಹ ಇದೇ ಜುಲೈ 1ರಿಂದ ಟೋಲ್ ಸಂಗ್ರಹಕ್ಕೆ ಮುಂದಾಗಲಿರುವುದು ಜನರಿಗೆ ನುಂಗಲಾರದ ತುತ್ತಾಗಿದೆ.

‌ಉದ್ಘಾಟನೆಯಾಗಿ ಎರಡು ತಿಂಗಳು ಕಳೆಯುವಷ್ಟರಲ್ಲಿ ಈ ರೀತಿಯ ಜನರಿಗೆ ಹೊರೆಯಾದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಅಲ್ಲದೆ, ಬೆಂಗಳೂರಿನಿಂದ ಮೈಸೂರಿಗೆ ಸ್ವಂತ ವಾಹನದಲ್ಲಿ ಹೋಗಿ ಬರಲು ಟೋಲ್ ಶುಲ್ಕವಾಗಿಯೇ 500 ರೂ. ಕಟ್ಟಬೇಕೆಂದರೆ ನಿಜಕ್ಕೂ ಪ್ರಯಾಣ ಎಂಬುದು ದುಸ್ತರವಾಗಲಿದೆ.  ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ರೂಪಿಸಿದ್ದ ಕಾರ್ಯಕ್ರಮಗಳು ಪುನರಾರಂಭ: ಸಿದ್ದರಾಮಯ್ಯ

Bengaluru Mysuru Expressway 1

ಒಂದೆಡೆ ಆರಂಭಿಕ ಹಂತದಲ್ಲಿ ಟೋಲ್ ಶುಲ್ಕ ಬೀಳುತ್ತಿದೆ. ಇದನ್ನು ಜೂನ್‌ 1ರಿಂದಲೇ ಜಾರಿಗೆ ಬರುವಂತೆ 22% ರಷ್ಟು ಹೆಚ್ಚಳ ಮಾಡಿ ಆದೇಶಿಸಲಾಗಿತ್ತು. ಮೊದಲೇ ಬೆಲೆ ಏರಿಕೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಇದೇ ಹೊರೆಯಂದು ಅಂದುಕೊಳ್ಳುತ್ತಿರಬೇಕಾದರೆ ಈಗ ಶ್ರೀರಂಗಪಟ್ಟಣದಲ್ಲಿಯೂ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಕಾಡುತ್ತಿದೆ.

ಹಾಗಾದರೆ, ಇಲ್ಲಿ ಎಲ್ಲ ಕಾಮಗಾರಿಗಳೂ ಪೂರ್ಣಗೊಂಡಿವೆಯೆ? ಎಂಬುದನ್ನು ನೋಡುವುದಾದರೆ ಖಂಡಿತವಾಗಿಯೂ ಆಗಿಲ್ಲ. ಆಗಬೇಕಿರುವ ಕಾಮಗಾರಿಗಳು ಹತ್ತಾರು ಇವೆ. ಅವುಗಳು ಇನ್ನೂ ಕುಂಟುತ್ತಾ ಸಾಗಿವೆ. ಕೇಳಿದರೆ ಕುಂಟು ನೆಪಗಳನ್ನು ಹೇಳಲಾಗುತ್ತದೆ. ಆದರೆ ಜನರಿಂದ ದುಡ್ಡು ಪಡೆಯಲು ಮಾತ್ರ ಇದಾವುದೂ ಲೆಕ್ಕಕ್ಕೇ ಬಾರದು ಎಂದರೆ ಹೇಗೆ? ಉದಾಹರಣೆಯಾಗಿ ಹೇಳುವುದಾದರೆ, ಮಂಡ್ಯ ತಾಲೂಕಿನ ಹನಕೆರೆ ಅಂಡರ್‌ಪಾಸ್, ಹಳೇ ಬೂದನೂರು ಹಾಗೂ ಹೊಸ ಬೂದನೂರು ನಡುವಿನ ಸರ್ವಿಸ್ ರಸ್ತೆಗೆ ನಿರ್ಮಾಣ ಮಾಡುತ್ತಿರುವ ಸೇತುವೆ ಸೇರಿದಂತೆ ಹಲವು ಕಾಮಗಾರಿಗಳು ಅಪೂರ್ಣವಾಗಿವೆ. ಇನ್ನು ಹಲವು ಕಡೆ ಸರ್ವಿಸ್ ರಸ್ತೆ ಕಾಮಗಾರಿ ಸಹ ಪೂರ್ಣಗೊಂಡಿಲ್ಲ. ಈ ಹಂತದಲ್ಲಿ ಟೋಲ್ ಸಂಗ್ರಹ ಮಾಡುವುದು ಸರಿ ಅಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಡೆ ಖಂಡನಾರ್ಹವಾಗಿದೆ.

ಒಟ್ಟಾರೆಯಾಗಿ ಮೈಸೂರಿಗೆ ಕಾರು ಮತ್ತು ಜೀಪಿನಲ್ಲಿ ಹೋಗಿ ಬರಬೇಕೆಂದರೂ 500 ರೂಪಾಯಿ ಬೇಕು. ಅದೂ ಟೋಲ್ ಶುಲ್ಕ ಮಾತ್ರ. ಇವರ ಪೆಟ್ರೋಲ್ ಚಾರ್ಜ್ ಸೇರಿದಂತೆ ಉಳಿದವು ಹೇಗೂ ಪ್ರತ್ಯೇಕವೇ ಆಗುತ್ತದೆ. ಅಂದರೆ, ಕಾರು/ಜೀಪುಗಳ ಏಕಮುಖ ಸಂಚಾರಕ್ಕೆ 320 ರೂ. ಹಾಗೂ ದ್ವಿಮುಖ ಸಂಚಾರಕ್ಕೆ 485 ರೂ. ನ್ನು ನಿಗದಿ ಮಾಡಲಾಗಿದೆ. ಹೀಗೆ ಡಬಲ್ ಟೋಲ್ ಹೊರೆ ಪ್ರಯಾಣಿಕರ ಮೇಲಾಗಲಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಮಾನ್ಯ ಮುಖ್ಯಮಂತ್ರಿಯವರಾದ ತಾವು ಈಗ ಈ ಬಗ್ಗೆ ಮಧ್ಯಪ್ರವೇಶ ಮಾಡಬೇಕು. ಅಲ್ಲದೆ, ಜನರಿಗೆ ಹೊರೆಯಾಗುತ್ತಿರುವ ಈ ನೂತನ ಟೋಲ್ ಸಂಗ್ರಹವನ್ನು ತಡೆಯಬೇಕು. ಸರ್ವಿಸ್ ರಸ್ತೆಗಳು ಸೇರಿದಂತೆ ಇನ್ನಿತರ ಕಾಮಗಾರಿ ಪೂರ್ಣವಾಗುವವರೆಗಾದರೂ ಟೋಲ್ ಸಂಗ್ರಹ ಮಾಡದಂತೆ ತಡೆಯೊಡ್ಡಲು ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ತಾವು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕೆಂದು ಶಾಸಕರಾದ ದಿನೇಶ್ ಗೂಳಿಗೌಡ, ರವಿಕುಮಾರ್ ಗಣಿಗ ಹಾಗೂ ರಮೇಶ್ ಬಂಡಿಸಿದ್ದೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article