ಬೆಂಗಳೂರು: ಮೈಸೂರು ಮುಡಾ ಹಗರಣ (MUDA Scam) ಸಂಬಂಧ ಸಿಎಂ ಭಂಡತನ ಬಿಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಡುವ ಮುಂಚಿತವಾಗಿ ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಆಗ್ರಹಿಸಿದ್ದಾರೆ.
ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸ್ನೇಹಮಯಿ ಕೃಷ್ಣ (Snehamayi Krishna) ಅವರು ಬಯಲಿಗೆಳೆದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಇದರ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತಾ ಬಂದಿದ್ದೇವೆ. ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದ್ದೇವೆ ಎಂದು ವಿವರಿಸಿದರು.ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ 20 ವರ್ಷ ಜೈಲು
Advertisement
Advertisement
ಮುಡಾ ಹಗರಣವು ನಿನ್ನೆ ಮಹತ್ವದ ತಿರುವು ಪಡೆದುಕೊಂಡಿದೆ. ಜಾರಿ ನಿರ್ದೇಶನಾಲಯವು (ಇಡಿ) 300 ಕೋಟಿ ರೂ.ಗೂ ಬೆಲೆಬಾಳುವ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳು ತಮ್ಮ ಕುಟುಂಬಕ್ಕೆ ಅಕ್ರಮವಾಗಿ 14 ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಹಗರಣದಿಂದ ಮುಡಾಕ್ಕೆ ಕೋಟಿಗಟ್ಟಲೆ ನಷ್ಟವಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬಡವರಿಗೆ ಮಂಜೂರಾಗಬೇಕಿದ್ದ ನಿವೇಶನಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು, ದಲ್ಲಾಳಿಗಳಿಗೆ ನೀಡಿದ್ದು ಸ್ಪಷ್ಟವಾಗಿದೆ. ಇದರಿಂದ ಸರ್ಕಾರ ಮತ್ತು ಮುಡಾಕ್ಕೆ ಸಾವಿರಾರು ಕೋಟಿ ನಷ್ಟವಾದುದು ಮತ್ತೊಮ್ಮೆ ಋಜುವಾತಾಗಿದೆ ಎಂದು ವಿಶ್ಲೇಷಿಸಿದರು.
Advertisement
ಪ್ರಕರಣವನ್ನು ಬಯಲಿಗೆ ಎಳೆದ ಸ್ನೇಹಮಯಿ ಕೃಷ್ಣ ಅವರನ್ನು ಅಭಿನಂದಿಸಿ, ಸ್ನೇಹಮಯಿ ಕೃಷ್ಣ ಅವರ ಧ್ವನಿ ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿತ್ತು. ಅವರ ಮೇಲೆ ಆರೋಪ ಹೊರಿಸಿ ಅವರನ್ನು ಬಂಧಿಸುವ ಹಂತಕ್ಕೂ ರಾಜ್ಯ ಸರ್ಕಾರ ಹೋಗಿತ್ತು. ಇ.ಡಿ ಕೈಗೊಂಡ ಕ್ರಮಗಳಿಂದ ಸಿದ್ದರಾಮಯ್ಯನವರು ಮತ್ತೊಮ್ಮೆ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ ಎಂದರು.
Advertisement
ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ಮಾನ್ಯ ರಾಜ್ಯಪಾಲರ ಮೇಲೂ ಅಪವಾದ ಹೊರಿಸುವ ಕೆಲಸವನ್ನು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಸಚಿವರು ಮಾಡಿದ್ದರು. ಘನತೆವೆತ್ತ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟದ್ದೇ ಅಪರಾಧ ಎಂಬಂತೆ ಬಿಂಬಿಸಲು ಯತ್ನಿಸಿದ್ದರು. ನಂತರ ರಾಜ್ಯ ಹೈಕೋರ್ಟ್, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟದ್ದು ಸರಿಯಾಗಿದೆ. ಮೇಲ್ನೋಟಕ್ಕೆ ಮುಡಾ ಹಗರಣದಲ್ಲಿ ತಪ್ಪು, ಅವ್ಯವಹಾರ ನಡೆದಿದೆ ಎಂದಿತ್ತು. ಅಲ್ಲದೆ, ಸಿಎಂ ಕುಟುಂಬಕ್ಕೆ ಅಕ್ರಮವಾಗಿ 14 ನಿವೇಶನ ಕೊಟ್ಟಿದ್ದಾರೆ ಎಂಬುದು ಮೇಲ್ನೋಟಕ್ಕೇ ಋಜುವಾತು ಆಗಿರುವುದನ್ನು ಹೈಕೋರ್ಟ್ ಮತ್ತೊಮ್ಮೆ ಹೇಳಿತ್ತು ಎಂದು ಹೇಳಿದರು.
ನಮಗೆ ಸಿದ್ದರಾಮಯ್ಯನವರ ಬಗ್ಗೆ ದ್ವೇಷ ಇಲ್ಲ. ಆದರೆ, ಅಪರಾಧ ಆದ ಸಂದರ್ಭದಲ್ಲಿ, ತಪ್ಪಾಗಿರುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಈಗಾಗಲೇ ರಾಜೀನಾಮೆ ಕೊಡಬೇಕಾಗಿತ್ತು. ಮುಖ್ಯಮಂತ್ರಿಗಳು ಸ್ವಯಂಪ್ರೇರಿತರಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕಿತ್ತು. ಹಗರಣವನ್ನು ದೀರ್ಘ ಕಾಲ ಎಳೆದುಕೊಂಡು ಬಂದಿದ್ದಾರೆ. ಕ್ಷೇತ್ರಕ್ಕೆ 10 ಕೋಟಿ ರೂ. ಕೊಡುವ ಮೂಲಕ ಸಿಎಂ ಮತ್ತು ಪ್ರಿಯಾಂಕ್ ಖರ್ಗೆಯವರು ನಮಗೇನು ಉಪಕಾರ ಮಾಡುತ್ತಿದ್ದಾರಾ? ಅನೇಕ ಶಾಸಕರು ಅನುದಾನವಿಲ್ಲದೆ ಹತಾಶರಾಗಿದ್ದಾರೆ. ಸರ್ಕಾರ ಆಡಳಿತ ವಹಿಸಿಕೊಂಡು 2 ವರ್ಷವಾಗಿದೆ. ನಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿಗಾಗಿ ಹತ್ತಿಪ್ಪತ್ತು ಕೋಟಿ ರೂ. ಹಣ ಕೊಡಲಿಲ್ಲವೆಂದಾದರೆ, ಇವರ ಯೋಗ್ಯತೆಗೆ ಯಾವ ರೀತಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಕ್ಷೇತ್ರಗಳ ಅಭಿವೃದ್ಧಿಗೆ ಹಣ ಕೊಡುವುದು ಇವರ ಕರ್ತವ್ಯ. ಸರ್ಕಾರವೇನೂ ಉಪಕಾರ ಮಾಡುತ್ತಿಲ್ಲ. ಈ ಸಂಬಂಧ ಹಣವನ್ನು ತಕ್ಷಣ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.ಇದನ್ನೂ ಓದಿ: ಸಿದ್ರಾಮಣ್ಣ ಏನೇನು ಬೆಲೆ ಜಾಸ್ತಿ ಮಾಡ್ತಿರೋ ಒಟ್ಟಿಗೆ ಮಾಡಿ ಬಿಡಿ – ಅಶೋಕ್