ಕೊಡಗು: ಕಾವೇರಿ ನದಿಗೆ ಸಾವಿರಾರು ಲೋಡ್ ಕಲ್ಲು, ಮಣ್ಣು ಸುರಿದು ಸಮತಟ್ಟು ಮಾಡುತ್ತಿದ್ದರೂ ಪಂಚಾಯ್ತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ.
ಕೊಡಗಿನಲ್ಲಿ ಕಳೆದ ಎರಡು ವರ್ಷಗಳಿಂದ ಕಾವೇರಿ ನದಿ ಉಕ್ಕಿ ಹರಿದು ಸಾವಿರಾರು ಜನರು ಮನೆಮಠ ಕಳೆದುಕೊಂಡಿದ್ದಾರೆ. ನದಿಪಾತ್ರದ ಜಾಗ ದಿನದಿಂದ ದಿನಕ್ಕೆ ಕಿರಿದಾಗುತ್ತಿರುವುದು ಕಾವೇರಿ ನದಿ ಉಕ್ಕಿ ಹರಿಯೋದಕ್ಕೆ ಕಾರಣ ಎನ್ನೋದು ಸಾಬೀತಾಗಿದೆ. ಇಷ್ಟೆಲ್ಲಾ ಆದರೂ ಜನರು ಮಾತ್ರ ಬುದ್ಧಿ ಕಲಿತಿಲ್ಲ. ಕೆಲ ಮಂದಿ ಕಾವೇರಿ ನದಿಗೆ ಸಾವಿರಾರು ಲೋಡ್ ಕಲ್ಲು, ಮಣ್ಣು ಸುರಿದು ಸಮತಟ್ಟು ಮಾಡುತ್ತಿದ್ದಾರೆ. ಆದರೆ ಇತ್ತ ಗಮನ ಕೊಡದೇ ಸ್ಥಳೀಯ ಪಂಚಾಯ್ತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
Advertisement
Advertisement
ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಸುತ್ತಮುತ್ತಲು ಹರಿಯುತ್ತಿರುವ ಕಾವೇರಿ ನದಿಯ ಒಡಲು ಇದೀಗ ಬರಿದಾಗುತ್ತಿದೆ. ನದಿಯ ಒಂದಡಿ ಜಾಗವನ್ನು ಬಿಡದಂತೆ ಮನೆಗಳನ್ನು ನಿರ್ಮಿಸಿರುವುದು ಅದಕ್ಕೆ ಕಾರಣವಾಗಿದೆ. ಹಲವರು ನದಿ ಪಾತ್ರದ ಜಾಗಗಳನ್ನು ಒತ್ತುವರಿ ಮಾಡಿ ಲೇಔಟ್‍ಗಳನ್ನು ಮಾಡಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಕೊಡಗಿನಲ್ಲಿ ಎರಡು ದಿನ ಮಳೆ ಸುರಿದರೆ ಸಾಕು ಪ್ರವಾಹ ಸೃಷ್ಟಿಯಾಗಿ ಬಿಡುತ್ತದೆ.
Advertisement
Advertisement
ಈ ಬಗ್ಗೆ ಗೊತ್ತಿದ್ದರೂ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಕಣಿವೆಯಲ್ಲಿ ಕಾವೇರಿ ನದಿಗೆ ಸಾವಿರಾರು ಲೋಡ್ ಕಲ್ಲು ಮಣ್ಣನ್ನು ತುಂಬಲಾಗಿದೆ. ಇದರ ಜೊತೆಗೆ ಬರೋಬ್ಬರಿ 20 ಅಡಿ ಆಳದಷ್ಟು ನದಿಯ ಪಕ್ಕದಲ್ಲಿ ಇರುವ ಗುಂಡಿಗಳನ್ನು ಮುಚ್ಚಿ ಸಮತಟ್ಟು ಮಾಡಲಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯ ಹೆಬ್ಬಾಲೆ ಕ್ಷೇತ್ರದ ಶ್ರೀನಿವಾಸ್ ಅವರು ತಮ್ಮ ಜಮೀನಿನಲ್ಲಿದ್ದ ದೊಡ್ಡ ಗುಡ್ಡವೊಂದನ್ನು ಅಗೆಸಿ, ಅಲ್ಲಿನ ಭಾರೀ ಗಾತ್ರದ ಕಲ್ಲು, ಮಣ್ಣನ್ನು ಕಾವೇರಿ ನದಿಗೆ ತುಂಬಿಸಿದ್ದಾರೆ. ಯಾಕೆ ಹೀಗೆ ಕಲ್ಲು, ಮಣ್ಣು ತುಂಬುತ್ತಿದ್ದೀರಾ ಎಂದು ಪ್ರಶ್ನಿಸಿದರೆ ಕಣಿವೆ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ನದಿ ಹರಿಯುತ್ತಿದ್ದು, ಅದರ ರಕ್ಷಣೆಗೆ ಹಾಕುವಂತೆ ಜನರು ಆಗ್ರಹಿಸಿದ್ದಕ್ಕೆ ತುಂಬಿಸಿದ್ದೇನೆ ಎಂದಿದ್ದಾರೆ.
ನದಿಯಿಂದ ಬರೋಬ್ಬರಿ 900 ಅಡಿ ಜಾಗ ಬಫರ್ ಜೋನ್ ಆಗಿದ್ದು, ಅಲ್ಲಿ ಯಾವುದೇ ಕಾಮಗಾರಿ ಮಾಡುವಂತಿಲ್ಲ. ಅದಕ್ಕಿಂತ ಮುಖ್ಯವಾಗಿ ಈ ಕಣಿವೆ ಜಾಗದಲ್ಲಿಯೇ ಹಾರಂಗಿಯಿಂದ ಹರಿದು ಬರುವ ಸಾವಿರಾರು ಕ್ಯೂಸೆಕ್ ನೀರು ಕೂಡ ಕಾವೇರಿ ನದಿ ಸೇರುತ್ತದೆ. ಆದರೆ ಹೀಗೆ ನದಿಗೆ ಸಾವಿರಾರು ಲೋಡ್ ಮಣ್ಣು ತುಂಬಿದರೆ ಕಾವೇರಿ ನೀರು ಮತ್ತು ಹಾರಂಗಿ ನೀರು ಎಲ್ಲಿ ಹರಿದು ಹೋಗಬೇಕು? ನದಿಯ ಜಾಗ ದೊಡ್ಡ ಗಾತ್ರದಲ್ಲಿ ಇರುವಾಗಲೇ ಕಾವೇರಿ ನೀರು ಉಕ್ಕಿ ಹರಿದು ಕಣಿವೆ, ಕೂಡುಮಂಗಳೂರು, ಕುಶಾಲನಗರದ ಹಲವು ಬಡಾವಣೆ ಸೇರಿದಂತೆ ಮೂರ್ನಾಡುವರೆಗೆ ಹಲವು ಗ್ರಾಮಗಳು ಮುಳುಗಿದ್ದವು. ಇಷ್ಟೆಲ್ಲಾ ಸಮಸ್ಯೆ ಎದುರಾಗಿರುವಾಗಲೂ ಕಾವೇರಿಗೆ ಇಷ್ಟೊಂದು ಮಣ್ಣು ತುಂಬುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ವಿಪರ್ಯಾಸ.