-ನಿನ್ನೆ ಬಸ್ ಇದ್ರೂ ಪ್ರಯಾಣಿಕರಿಲಿಲ್ಲ, ಇಂದು ಪ್ರಯಾಣಿಕರಿದ್ರೂ ಬಸ್ ಇಲ್ಲ
ರಾಮನಗರ/ಬೆಂಗಳೂರು: ಕಾರ್ಮಿಕರ ಮುಷ್ಕರ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಮೊದಲ ದಿನ ರಾಜ್ಯದಲ್ಲಿ ಬಂದ್ ಗೆ ತೀವ್ರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಎರಡನೇ ದಿನವೂ ಸಾಧಾರಣ ಪ್ರತಿಭಟನೆ ಎಂದು ಜನರು ಮನೆಯಿಂದ ಹೊರಬಂದ್ರೆ, ಬಸ್ ಗಳ ಸಂಚಾರ ಭಾಗಶಃ ಸ್ತಬ್ಧಗೊಂಡಿದೆ. ಮಧ್ಯರಾತ್ರಿಯಿಂದ ಇದೂವರೆಗೂ ಬೆಂಗಳೂರಿನಲ್ಲಿ 12 ಬಸ್ ಗಳ ಮೇಲೆ ಕಿಡಿಗೇಡಿಗಳು ಕಲ್ಲೆಸೆದು ಪರಾರಿಯಾಗಿದ್ದಾರೆ. ಇತ್ತ ರಾಮನಗರದಲ್ಲಿ 6 ಬಸ್ ಗಳ ಮೇಲೆ ಕಲ್ಲೆಸಯಲಾಗಿದೆ.
ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ರಸ್ತೆಗಿಳಿದಿದ್ದ 6 ಬಸ್ ಗಳ ಮೇಲೆ ದುಷ್ಕರ್ಮಿಗಳು ಕಲ್ಲೆಸೆದು ಹಾನಿ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹಾಗೂ ಕಡಬಗೆರೆ ಸಮೀಪದಲ್ಲಿ ನಡೆದಿದೆ. ನಾಲ್ಕು ಬಿಎಂಟಿಸಿ, ಎರಡು ಕೆಎಸ್ ಅರ್ ಟಿಸಿ ಬಸ್ ಗಳ ಮೇಲೆ ಕಲ್ಲು ತೂರಿದ್ದು ಬಸ್ ನ ಗಾಜುಗಳು ಹಾನಿಗೊಳಗಾಗಿವೆ.
Advertisement
Advertisement
ಮಾಗಡಿ- ಬೆಂಗಳೂರು ಮಾರ್ಗದ ಮಾಗಡಿ ಡಿಪೋಗೆ ಸೇರಿದ ಕೆಎ-42 ಎಫ್ -220 ನಂಬರ್ ನ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದು ಹಾನಿಗೊಳಗಾದ ಬಸ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ರವಾನಿಸಲಾಗಿದೆ. ತಾವರೆಕೆರೆ ಸಮೀಪದ ಚನ್ನೇನಹಳ್ಳಿ ಬಳಿ 1 ಕೆಎಸ್‍ಆರ್ ಟಿಸಿ ಬಸ್ ಗೆ, ಸಂಗದಾಸಿಪಾಳ್ಯ 2, ಲಕ್ಕುಪ್ಪನಳ್ಳಿ 2 ಬಿಎಂಟಿಸಿ ಬಸ್ ಗೆ ಕಲ್ಲು ತೂರಿದ್ದು ಹಾನಿಗೊಳಗಾದ ಬಸ್ ಗಳು ತಾವರೆಕೆರೆ ಪೊಲೀಸ್ ಠಾಣೆಗೆ ರವಾನಿಸಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನೂ ಬಸ್ ಗಳ ಮೇಲೆ ಕಲ್ಲು ತೂರಿದ್ರಿಂದ ಮಾಗಡಿ- ಬೆಂಗಳೂರು ಮಾರ್ಗದ ಬಸ್ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ
Advertisement
ಬಂದ್ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸಿಐಟಿಯು ಕಾರ್ಯಕರ್ಯರು ಕೆಎಸ್‍ಆರ್ ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕಾರವಾರ ನಗರದ ಮುಖ್ಯ ಬಸ್ ನಿಲ್ದಾಣದ ಬಳಿ ಆಗಮಿಸಿದ ಸಿಐಟಿಯು ಕಾರ್ಯಕರ್ತರು ಕಾರವಾರ ನಗರದಿಂದ ಹೊರಡಬೇಕಿದ್ದ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಕಾರವಾರದಿಂದ ವಿವಿಧೆಡೆ ತೆರಳಬೇಕಿದ್ದ ಬಸ್ ಗಳು ಬಂದ್ ಆಗಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
Advertisement
ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ ಗಾಗಿ ಕಾಯುವಂತಾಗಿದೆ. ಬೆಳಗಿನ ಜಾವ ಬಸ್ ಸಂಚಾರವಿದ್ದ ಹಿನ್ನೆಲೆಯಲ್ಲಿ ಹೊರಬಂದ ಜನರು ತಮ್ಮ ನಿಗದಿತ ಸ್ಥಳಗಳಿಗೆ ತಲುಪಲು ಪರದಾಡುತ್ತಿದ್ದಾರೆ. ಮಂಗಳವಾರ ಬಂದ್ ಇದ್ದರೂ ಸಾರಿಗೆ ಬಸ್ ಗಳು ರಸ್ತೆಗೆ ಇಳಿದಿದ್ದರೂ, ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದ್ದವು. ಇಂದು ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ, ಅಲ್ಲಲ್ಲಿ ಕಲ್ಲು ತೂರಾಟ ನಡೆದಿದ್ದರಿಂದ ಬೆರಳಿಕೆ ಬಸ್ ಗಳು ಮಾತ್ರ ರಸ್ತೆಗೆ ಇಳಿದಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv