ಮಂಗಳೂರು: ಮಾಜಿ ಅರಣ್ಯ ಸಚಿವ ರಮಾನಾಥ ರೈ ಆಪ್ತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯ ಪದ್ಮಶೇಖರ್ ಜೈನ್ ಎಂಬವರು ರೈ ಪ್ರತಿನಿಧಿಸುತ್ತಿದ್ದ ಬಂಟ್ವಾಳ ತಾಲೂಕಿನಲ್ಲಿ ರಕ್ಷಿತಾರಣ್ಯವನ್ನೇ ಅತಿಕ್ರಮಿಸಿ ಕಲ್ಲಿನ ಕ್ವಾರಿ ನಡೆಸ್ತಿರೋದು ಬೆಳಕಿಗೆ ಬಂದಿದೆ.
ಬಂಟ್ವಾಳ ತಾಲೂಕಿನ ಕೊಡ್ಯಮಲೆ ರಕ್ಷಿತಾರಣ್ಯ ವ್ಯಾಪ್ತಿಯ ಸರ್ವೆ ನಂಬರ್ 164 /2 ಮತ್ತು 172/2 ರಲ್ಲಿ ಕಳೆದ ಹತ್ತು ವರ್ಷಗಳಿಂದ ಕಲ್ಲಿನ ಕೋರೆ ನಡೆಸುತ್ತಿದ್ದು, ಇದೀಗ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ.
Advertisement
Advertisement
ಅರಣ್ಯ ಇಲಾಖೆ, ಗಣಿ ಇಲಾಖೆ ಸೇರಿದಂತೆ ಸ್ಥಳೀಯ ಪಂಚಾಯತ್ ಮಟ್ಟದ ಅಧಿಕಾರಿಗಳೂ ಈ ಅಕ್ರಮದಲ್ಲಿ ಶಾಮೀಲಾಗಿರುವ ಆರೋಪ ಕೇಳಿಬಂದಿದೆ. ಕಳೆದ ಹತ್ತು ವರ್ಷಗಳಿಂದ ಇಲ್ಲಿ ಅಕ್ರಮ ಕ್ವಾರಿ ನಡೆಯುತ್ತಿದ್ದರೂ, ಈ ಬಗ್ಗೆ ಯಾವೊಬ್ಬ ಅಧಿಕಾರಿಯೂ ಕಾನೂನು ಉಲ್ಲಂಘನೆಯ ಆಕ್ಷೇಪ ಎತ್ತಿಲ್ಲ. ವಿಶೇಷ ಅಂದ್ರೆ, ಬಂಟ್ವಾಳದ ಆರ್ ಟಿಐ ಕಾರ್ಯಕರ್ತರೊಬ್ಬರು ಅಧಿಕಾರಿ ವರ್ಗದ ಮೇಲೆ ವಿಶ್ವಾಸ ಕಳೆದುಕೊಂಡು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಮಂಗಳೂರಿನ ಗಣಿ ಇಲಾಖೆ ಅಧಿಕಾರಿಗಳು ಹೈಕೋರ್ಟಿಗೂ ತಪ್ಪು ಮಾಹಿತಿ ನೀಡಿದ್ದಾರೆ.
Advertisement
Advertisement
ಅಕ್ರಮ ಕ್ವಾರಿ ಅರಣ್ಯ ಪ್ರದೇಶದ 10 ಎಕರೆಗೂ ಹೆಚ್ಚು ಪ್ರದೇಶದಲ್ಲಿ ನಡೀತಿದ್ದರೂ, ಅದರ ಬಗ್ಗೆ ಉಲ್ಲೇಖಿಸದೆ 2015ರ ಬಳಿಕ ಕ್ವಾರಿಗೆ ಅನುಮತಿಯನ್ನೇ ನೀಡಿಲ್ಲ ಎಂದು ಜುಲೈ 2ರಂದು ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಇದೇ ಗಣಿ ಅಧಿಕಾರಿಗಳು ಆರ್ ಟಿಐ ಮಾಹಿತಿಯಡಿ ಕೇಳಿದ ಪ್ರಶ್ನೆಗೆ, ಸದ್ರಿ ಸರ್ವೆ ನಂಬರಿನಲ್ಲಿ ಯಾವುದೇ ಕ್ವಾರಿ, ಕ್ರಷರ್ ಗೆ ಅನುಮತಿ ನೀಡಿಲ್ಲ ಎಂದಿದ್ದು ಅಧಿಕಾರಿಗಳ ಶಾಮೀಲಾತಿಯ ಶಂಕೆ ಮೂಡುವಂತಾಗಿದೆ. ಹೀಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಅಧಿಕಾರಿಗಳು ಮತ್ತು ಪರಿಸರ ಇಲಾಖೆ ಅಧಿಕಾರಿಗಳು ಈ ಅಕ್ರಮದಲ್ಲಿ ನೇರ ಶಾಮೀಲಾಗಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ.
ಕ್ವಾರಿ ವಿರುದ್ಧ ಸ್ಥಳೀಯರು ಯಾವುದೇ ದೂರು ನೀಡಿದ್ರೂ, ಧಮ್ಕಿ ಮೂಲಕ ಬಾಯಿ ಮುಚ್ಚಿಸ್ತಾರೆಂಬ ಆರೋಪ ಕೂಡ ಕೇಳಿಬಂದಿದೆ.