ಚಿಕ್ಕಬಳ್ಳಾಪುರ: ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯಡಿಯ ಕೆಎಂಎಂಸಿಆರ್ (KMMCR) ಕಾಯಿದೆಗೆ ಸಮಗ್ರ ತಿದ್ದುಪಡಿ ತರುವಂತೆ ಒತ್ತಾಯಿಸಿ, ಇಂದಿನಿಂದ ರಾಜ್ಯಾದ್ಯಂತ 2,000ಕ್ಕೂ ಹೆಚ್ಚು ಕಲ್ಲು ಪುಡಿ ಘಟಕ (Stone Crusher) ಹಾಗೂ ಕ್ವಾರಿಗಳನ್ನು (Quarry) ಬಂದ್ ಮಾಡಿ ಮಾಲೀಕರು ಅನಿರ್ದಿಷ್ಟಾವಧಿ ಧರಣಿ ನಡೆಸಲು ಮುಂದಾಗಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಹಾಗೂ ಸ್ಟೋನ್ ಕ್ರಷರ್ ಒನರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರು, ಈಗಾಗಲೇ ಗಣಿ ಮಾಲೀಕರಿಂದ ರಾಯಧನವನ್ನು ಸಂಗ್ರಹ ಮಾಡುತ್ತಿದ್ದರೂ ಸರ್ಕಾರ ಮರಳಿ ಗುತ್ತಿಗೆದಾರರಿಂದ ರಾಯಧನ ಸಂಗ್ರಹ ಮಾಡುತ್ತಿರುವುದು ಸರಿಯಲ್ಲ. ಇನ್ನೂ ಕೆಎಂಎಂಸಿಆರ್-1994 ಕಾಯಿದೆಯಲ್ಲಿ ಹಲವು ನಿಯಮಗಳಿಗೆ ತಿದ್ದುಪಡಿಗಳನ್ನು ತರಬೇಕು ಹಾಗೂ ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ನೀಡಿರುವ ಆದೇಶವನ್ನು ಕೆಎಂಎಂಸಿಆರ್ ಕಾಯಿದೆ ತಿದ್ದುಪಡಿ ಆದ ನಂತರ ಅನುಷ್ಠಾನಗೊಳಿಸುವುದು ಸೇರಿ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಾಡಹಗಲೇ ರಸ್ತೆಯಲ್ಲಿ ಯುವತಿಯನ್ನು ಕೊಂದು ತಾನೂ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ ಯುವಕ ಸಾವು
ಹಾಗಾಗಿ ಕಲ್ಲು ಪುಡಿ ಘಟಕ ಹಾಗೂ ಕ್ವಾರಿಗಳನ್ನು ಬಂದ್ ಮಾಡಿದ್ದು ಎಂ ಸ್ಯಾಂಡ್ ಸೇರಿದಂತೆ ಜಲ್ಲಿ ಕಲ್ಲು ಮಾರಾಟ, ಸಾಗಾಟ ಕೂಡ ಬಂದ್ ಆಗಲಿದೆ. ಇದ್ರಿಂದ ಕಟ್ಟಡ, ರಸ್ತೆ, ಸೇತುವೆ ಕಾಮಗಾರಿಗಳಿಗೆ ಸಮಸ್ಯೆ ಎದುರಾಗಲಿದೆ. ಡಿ.28 ರಂದು ಕಲ್ಲು ಪುಡಿ ಘಟಕ ಹಾಗೂ ಕ್ವಾರಿಗಳ ಮಾಲೀಕರು, ಕಾರ್ಮಿಕರು ಬೆಳಗಾವಿಯ ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕಲು ತೀರ್ಮಾನ ಮಾಡಿದ್ದಾರೆ. ಇದನ್ನೂ ಓದಿ: ದರ್ಗಾ ಅಭಿವೃದ್ಧಿಗೆ 6 ಕೋಟಿ ದೇಣಿಗೆ ನೀಡಿದ ಜನಾರ್ದನ ರೆಡ್ಡಿ