– ಧೋನಿ ದಾಖಲೆ ಉಡೀಸ್ ಮಾಡಿದ ಗಾಯಕ್ವಾಡ್
– IPLನಲ್ಲಿ ಶತಕ ಸಿಡಿಸಿದ ಮೊದಲ ಸಿಎಸ್‌ಕೆ ನಾಯಕ ಋತುರಾಜ್
ಚೆನ್ನೈ: ಮಾರ್ಕಸ್ ಸ್ಟೊಯಿನಿಸ್ ಅಬ್ಬರದ ಶತಕದಾಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 6 ವಿಕೆಟ್‌ಗಳ ಜಯ ಸಾಧಿಸಿತು.
ಚೆನ್ನೈನಲ್ಲಿ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಕೆ.ಎಲ್.ರಾಹುಲ್ ಪಡೆ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಚೆನ್ನೈ ನಾಯಕ ಋತುರಾಜ್ ಶತಕದಾಟ ಮತ್ತು ಶಿವಂ ದುಬೆ ಸ್ಫೋಟಕ ಶೈಲಿಯ ಅರ್ಧಶತಕ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು. 211 ರನ್ ಗುರಿ ಬೆನ್ನತ್ತಿದ ಲಕ್ನೋ 20 ಓವರ್‌ಗೆ 3 ಬಾಲ್ ಬಾಕಿ ಇರುವಾಗಲೇ 4 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಚೆನ್ನೈ ಆರಂಭದಲ್ಲೇ ಆಘಾತ ಎದುರಿಸಿತು. ಅಜಿಂಕ್ಯ ರಹಾನೆ ಕೇವಲ 1 ರನ್ ಗಳಿಸುತ್ತಿದ್ದಂತೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಈ ವೇಳೆ ಜವಾಬ್ದಾರಿಯುತ ಆಟವಾಡಿದ ಋತುರಾಜ್ ಗಾಯಕ್ವಾಡ್ ಶತಕ ಗಳಿಸಿ ಗಮನ ಸೆಳೆದರು. ಚೆನ್ನೈ ತಂಡದ ಇತಿಹಾಸದಲ್ಲೇ ನಾಯಕ ಸಿಡಿಸಿದ ಮೊದಲ ಶತಕ ಎಂಬ ದಾಖಲೆಯನ್ನು ಗಾಯಕ್ವಾಡ್ ಬರೆದರು. ಗಾಯಕ್ವಾಡ್ ಔಟಾಗದೇ ಶತಕ ಸಿಡಿಸಿ (108 ರನ್, 60 ಬಾಲ್, 12 ಫೋರ್, 3 ಸಿಕ್ಸರ್) ಮಿಂಚಿದರು.
ಇವರಿಗೆ ರವೀಂದ್ರ ಜಡೇಜಾ ಉತ್ತಮ ಜೊತೆಯಾಟ ನೀಡಿದರು. ಗಾಯಕ್ವಾಡ್ ಮತ್ತು ಜಡೇಜಾ ಜೋಡಿ 39 ಬಾಲ್‌ಗೆ 52 ರನ್‌ಗಳ ಜೊತೆಯಾಟವಾಡಿತು. ಈ ವೇಳೆ ಜಡೇಜಾ 16 ರನ್ ಗಳಿಸಿ ಔಟಾದರು. ರನ್ ಗಳಿಕೆ ವೇಗ ಕಡಿಮೆಯಿದ್ದರೂ ಇನ್ನಿಂಗ್ಸ್‌ಗೆ ಸ್ಥಿರತೆ ಒದಗಿಸುವಲ್ಲಿ ಈ ಜೊತೆಯಾಟ ನೆರವಾಯಿತು.
ತಂಡದ ಮೊತ್ತ 200 ರ ಗಡಿ ದಾಟಲು ದುಬೆ ಕೊಡುಗೆಯೂ ಇದೆ. 244 ರ ಸ್ಟೈಕ್‌ರೇಟ್‌ನಲ್ಲಿ ಬ್ಯಾಟ್ ಮಾಡಿದ ದುಬೆ 22 ಎಸೆತಕ್ಕೆ 66 ರನ್ ಸಿಡಿಸಿ ಮಿಂಚಿದರು. ದುಬೆ ಆಟದ ರಭಸಕ್ಕೆ ಲಕ್ನೋ ಬೌಲರ್‌ಗಳು ಬಸವಳಿದರು. ನಂತರ ದುಬೆ ರನ್‌ಔಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಕ್ರೀಸ್‌ಗೆ ಬಂದ ಮಹೇಂದ್ರ ಸಿಂಗ್ ಧೋನಿ ತಮಗೆ ಸಿಕ್ಕ ಏಕೈಕ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ಅಭಿಮಾನಿಗಳಿಗೆ ಖುಷಿ ಕೊಟ್ಟರು.
ಲಕ್ನೋ ಪರ ಮ್ಯಾಟ್ ಹೆನ್ರಿ, ಮೊಹ್ಸಿನ್ ಖಾನ್, ಯಶ್ ಠಾಕೂರ್ ತಲಾ 1 ವಿಕೆಟ್ ಕಿತ್ತರು.
ಚೆನ್ನೈ ನೀಡಿದ 211 ರನ್ ಗುರಿ ಬೆನ್ನತ್ತಿದ ಲಕ್ನೋ ಕೂಡ ಆರಂಭಿಕ ಆಘಾತ ಎದುರಿಸಿತು. ಓಪನರ್ ಕ್ವಿಂಟನ್ ಡಿ ಕಾಕ್ 3 ಎಸೆತಗಳನ್ನು ಎದುರಿಸಲು ತಿಣುಕಾಡಿ ಕೊನೆಗೆ ಶೂನ್ಯ ವಿಕೆಟ್ ಒಪ್ಪಿಸಿ ಹೊರನಡೆದರು. ನಾಯಕ ಕೆ.ಎಲ್.ರಾಹುಲ್ ಕೂಡ ಕೇವಲ 16 ರನ್‌ಗಳಿಸಲಷ್ಟೇ ಶಕ್ತರಾದರು.
ಈ ವೇಳೆ ತಂಡಕ್ಕೆ ಆಸರೆಯಾದವರು ಸ್ಟೊಯಿನಿಸ್. ಕೊನೆವರೆಗೂ ಹೋರಾಡಿ ಲಕ್ನೋವನ್ನು ಗೆಲುವಿನ ದಡ ಸೇರಿದರು. ಸ್ಟೊಯಿನಿಸ್ ಶತಕದಾಟದೊಂದಿಗೆ ಅಬ್ಬರಿಸಿದರು. 63 ಬಾಲ್‌ಗೆ 124 ರನ್ (13 ಫೋರ್, 6 ಸಿಕ್ಸರ್) ಗಳಿಸಿ ತಂಡದ ಗೆಲುವಿಗೆ ಕಾರಣರಾದರು.
ದೇವದತ್ ಪಡಿಕ್ಕಲ್ 13, ನಿಕೋಲಸ್ ಪೂರನ್ 34, ದೀಪಕ್ ಹೂಡಾ ಔಟಾಗದೇ 17 ರನ್ ಗಳಿಸಿದರು. ಚೆನ್ನೈ ಪರ ಮತೀಶ ಪತಿರಾನ 2, ದೀಪಕ್ ಚಹಾರ್ ಹಾಗೂ ಮುಸ್ತಫಿಜುರ್ ರೆಹಮಾನ್ ತಲಾ 1 ವಿಕೆಟ್ ಕಬಳಿಸಿದರು.