– ರೆಸಾರ್ಟಿನಿಂದ ಮರಳುವಾಗ ಬಾಕಿ ಹಣ ತನ್ನಿ : ಬಿಜೆಪಿ ವ್ಯಂಗ್ಯ
– ಅಧಿವೇಶನದಲ್ಲಿ ದಂಡ ವಸೂಲಿ ಮಾಡ್ತೀವಿ ಎಂದಿದ್ದ ದೇಶಪಾಂಡೆ
– ಸರ್ಕಾರಕ್ಕೆ ರೆಸಾರ್ಟ್ ಮೇಲೆ ಇಷ್ಟೊಂದು ಅಕ್ಕರೆ ಯಾಕೆ: ಸುರೇಶ್ ಕುಮಾರ್ ಪ್ರಶ್ನೆ
ಬೆಂಗಳೂರು: ನೀವು ಉಳಿದುಕೊಂಡಿರುವ ರೆಸಾರ್ಟ್ ಸರ್ಕಾರಕ್ಕೆ ನೀಡಬೇಕಾದ 982 ಕೋಟಿ ರೂ. ದಂಡವನ್ನು ಬಾಕಿ ಉಳಿಸಿಕೊಂಡಿದೆ. ಅಲ್ಲಿಂದ ನೀವು ವಾಪಾಸ್ ಬರುವಾಗ ಹಣವನ್ನು ಪಡೆದುಕೊಂಡು ಬನ್ನಿ ಎಂದು ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ನಾಯಕರ ಕಾಲೆಳೆದಿದೆ.
ಕಾಂಗ್ರೆಸ್‍ನ ಮರ್ಯಾದಾ ಪುರುಷೋತ್ತಮರಾದ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಈಗಲ್ ಟನ್ ರೆಸಾರ್ಟ್ ಗೆ ಹೋಗಿದ್ದಾರೆ. ಸರ್ಕಾರಕ್ಕೆ ರೆಸಾರ್ಟ್ ಪಾವತಿಸಬೇಕಾದ ದಂಡದ ಹಣವನ್ನು ತಂದರೆ ಅದನ್ನು ರೈತರ ಸಾಲ ಮನ್ನಾಕ್ಕೆ ಬಳಸಬಹುದು ಎಂದು ಬಿಜೆಪಿ ವ್ಯಂಗ್ಯವಾಡಿದೆ.
Advertisement
Advertisement
ಏನಿದು ಪ್ರಕರಣ?:
ಬಿಡದಿ ಬಳಿ ಇರುವ ಈಗಲ್‍ಟನ್ ರೆಸಾರ್ಟ್ 77 ಎಕರೆ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದಕ್ಕೆ ರಾಜ್ಯ ಸರ್ಕಾರ ಬರೋಬ್ಬರಿ 982 ಕೋಟಿ ರೂ. ದಂಡ ಹಾಕಿತ್ತು. ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ಪೆನಾಲ್ಟಿ ಹಾಕಲು ಸಿದ್ದರಾಮಯ್ಯ ಸರ್ಕಾರದ ಕ್ಯಾಬಿನೆಟ್ ತೀರ್ಮಾನಿಸಿತ್ತು. 982 ಕೋಟಿ ರೂ. ದಂಡ ಕಟ್ಟಬೇಕು ಇಲ್ಲದೇ ಇದ್ದರೆ 77 ಎಕ್ರೆ ಭೂಮಿಯನ್ನು ಸರ್ಕಾರಕ್ಕೆ ನೀಡಬೇಕು ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಈ ಹಿಂದೆ ತಿಳಿಸಿದ್ದರು. ಕ್ಯಾಬಿನೆಟ್ ತೀರ್ಮಾನ ಕೈಗೊಂಡು ಪೆನಾಲ್ಟಿ ವಿಧಿಸಿದ ಬೆನ್ನಲ್ಲೇ ರೆಸಾರ್ಟಿಗೆ ಗುಜರಾತ್‍ನ 42 ಜನ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದರು.
Advertisement
Eagleton resort owe GOK ₹998cr Penalty amount in land encroachment case.
Now that Congress Party will spend time in resort we request ‘Maryada Purushothama’ Sri. @siddaramaiah, @DKShivakumar & @dineshgrao to collect this money while u return
U can use it for farmer loan waiver pic.twitter.com/bAZLbtJU3L
— BJP Karnataka (@BJP4Karnataka) January 19, 2019
Advertisement
2012ರಲ್ಲೂ ಬಿಜೆಪಿ ಸರ್ಕಾರ ಇದೇ ರೆಸಾರ್ಟ್ ನ 72 ಎಕರೆ ಸಕ್ರಮಕ್ಕೆ 82 ಕೋಟಿ ರೂ. ಪೆನಾಲ್ಟಿ ಹಾಕಿತ್ತು. ಬಳಿಕ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಆಂಧ್ರಪ್ರದೇಶದ ಉದ್ಯಮಿ ಮೇದಾ ಅಶೋಕ್‍ಗೆ ಈ ರೆಸಾರ್ಟ್ ಸೇರಿದ್ದು, 2000ನೇ ಇಸ್ವಿಯಲ್ಲಿ ರೆಸಾರ್ಟ್ ನಿರ್ಮಾಣಗೊಂಡಿದೆ. 2013ರಿಂದ ಅವರ ಮಕ್ಕಳಾದ ಮೇದಾ ಕಿರಣ್ ಕುಮಾರ್, ಮೇದಾ ಚೇತನ್ ಅವರು ರೆಸಾರ್ಟ್ ನಡೆಸುತ್ತಿದ್ದಾರೆ. ವಿಶೇಷವಾಗಿ 2006 ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗುವಾಗ ಇದೇ ರೆಸಾರ್ಟ್ ನಲ್ಲಿ ಜೆಡಿಎಸ್ ಶಾಸಕರು ತಂಗಿದ್ದರು.
ಸುರೇಶ್ ಕುಮಾರ್ ಪೋಸ್ಟ್ : ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಈಗಲ್ ಟನ್ ರೆಸಾರ್ಟ್ ಕುರಿತು ಹೇಳಿಕೊಂಡಿದ್ದಾರೆ. ಈಗಲ್ ಟನ್ ರೆಸಾರ್ಟ್ ನಿಂದ ಸರ್ಕಾರಕ್ಕೆ 982 ಕೋಟಿ ರೂ, ಬರಬೇಕಾಗಿದೆ. ಕೋರ್ಟ್ ಸೂಚನೆ ಕೊಟ್ಟಿದ್ದರೂ ಇದುವರೆಗೂ ರಾಜ್ಯ ಸರ್ಕಾರ ಹಣ ವಸೂಲಾತಿ ಮಾಡಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಹಣ ವಸೂಲಾತಿ ಮಾಡದಿರುವ ಬಗ್ಗೆ ಸದನದಲ್ಲಿ ಉತ್ತರಿಸಲು ತಡಬಡಾಯಿಸಿದ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಅವರು, ಯಾವ ಮೂಲಾಜಿಗೂ ಈಡಾಗದೇ ರೆಸಾರ್ಟ್ ನಿಂದ 982 ಕೋಟಿ ವಸೂಲಿ ಮಾಡುತ್ತೇವೆ ಸ್ವಲ್ಪ ಸಮಯ ಕೊಡಿ ಎಂದು ಸ್ಪೀಕರ್ ಎದುರು ಮನವಿ ಮಾಡಿದ್ದರು. ಈಗ ಅದೇ ರೆಸಾರ್ಟ್ ನಲ್ಲಿ ಕಾಂಗ್ರೆಸ್ ತನ್ನ ಶಾಸಕರಿಗೆ ವಾಸ್ತವ್ಯ ಕಲ್ಪಿಸಿದೆ. ಈ ಮೂಲಕ ಮತ್ತೆ ಈಗಲ್ ಟನ್ ರೆಸಾರ್ಟ್ ಮುಲಾಜಿಗೆ ಮೈತ್ರಿ ಸರ್ಕಾರ ಬಿದ್ದಿದೆ ಎಂದು ಹೇಳಿದ್ದಾರೆ.
ಮೈತ್ರಿ ಸರ್ಕಾರ ಮುರಿದು ಬೀಳುವ ಹಂತದಲ್ಲಿ ಕೈ ಶಾಸಕರ ರಕ್ಷಣೆಗೆ ಈಗಲ್ ಟನ್ ರೆಸಾರ್ಟ್ ಬಳಕೆ ಮಾಡಲಾಗುತ್ತಿದೆ. ಆದರೆ ಸರ್ಕಾರಿ ಜಮೀನನ್ನು ಕಬಳಿಸಿಕೊಂಡು ಈಗಲ್ ಟನ್ ರೆಸಾರ್ಟ್ ನೆಲೆ ನಿಂತಿದೆ. 77 ಎಕರೆ ಸರ್ಕಾರಿ ಜಮೀನನ್ನು ಅತಿಕ್ರಮಣ ಮಾಡಿಕೊಂಡು, 982 ಕೋಟಿ ರೂ., ದಂಡಕ್ಕೆ ಗುರಿಯಾಗಿತ್ತು. ಆದರೆ ಸರ್ಕಾರದ ಭೂಮಿ ಲಪಟಾಯಿಸಿರುವ ಈಗಲ್ ಟನ್ ರೆಸಾರ್ಟ್ ಮೇಲೆ ಏಕೆ ಕಾಂಗ್ರೆಸ್‍ಗೆ ಇಷ್ಟೊಂದು ಅಕ್ಕರೆ? ಕೈ ಶಾಸಕರ ರಕ್ಷಣೆಗೆ ಬೇರೆ ಯಾವ ರೆಸಾರ್ಟ್ ಸಿಗಲಿಲ್ಲವೇ ಎಂದು ಸುರೇಶ್ ಕುಮಾರ್ ಕುಟುಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv