Connect with us

ಮಗನನ್ನು ಉಲ್ಟಾ ನೇತುಹಾಕಿ, ಚಪ್ಪಲಿ-ಬೆಲ್ಟ್ ನಿಂದ ರಕ್ತ ಬರುವಂತೆ ಥಳಿಸಿದ ನಿರ್ದಯಿ ತಂದೆ

ಮಗನನ್ನು ಉಲ್ಟಾ ನೇತುಹಾಕಿ, ಚಪ್ಪಲಿ-ಬೆಲ್ಟ್ ನಿಂದ ರಕ್ತ ಬರುವಂತೆ ಥಳಿಸಿದ ನಿರ್ದಯಿ ತಂದೆ

ಭೋಪಾಲ್: ನಿರ್ದಯಿ ಮಲತಂದೆಯೊಬ್ಬ 3 ವರ್ಷದ ಮಗನನ್ನು ತಲೆಕೆಳಗಾಗಿ ನೇತು ಹಾಕಿ ರಕ್ತ ಬರುವಂತೆ ಹೊಡೆದಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಶಾಜಾಪುರ್‍ನಲ್ಲಿ ನಡೆದಿದೆ.

ನೆರೆಹೊರೆಯವರು ಈ ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ. ಬಾಲಕ ಮಾಡಿದ ತಪ್ಪಾದರೂ ಏನು ಅಂದ್ರಾ? ಆತನಿಗೆ 10ವರೆಗೆ ಸಂಖ್ಯೆ ಎಣಿಸಲು ಬರುತ್ತಿರಲಿಲ್ಲ. ಇಷ್ಟಕ್ಕೇ ಪಾಪಿ ತಂದೆ ಮೃಗದ ರೀತಿ ವರ್ತಿಸಿದ್ದಾನೆ. ಬಾಲಕನ ತಾಯಿ ಮಧ್ಯಪ್ರವೇಶಿಸಲು ಯತ್ನಿಸಿದರಾದ್ರೂ ಆಕೆಗೂ ಹೊಡೆತ ಬಿದ್ದಿದೆ. ನೆರೆಹೊರೆಯವರು ಕೂಡ ಬಾಲಕನನ್ನು ರಕ್ಷಿಸಲು ಯತ್ನಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ.

ಕೂಡಲೇ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಅವರು ಸ್ಥಳಕ್ಕೆ ಬಂದ ಕೂಡಲೇ ರಾಕ್ಷಸ ತಂದೆ ಪರಾರಿಯಾಗಿದ್ದಾನೆ. ತಂದೆಯ ಹೊಡೆತದಿಂದ ಗಾಯಗಳಾಗಿ ರಕ್ತಸ್ರಾವವಾಗುತ್ತಿದ್ದ ಬಾಲಕನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಬಾಲಕನ ಮೈಮೇಲಿನ ಗಾಯಗಳನ್ನ ನೋಡಿದ್ರೆ ಆತನಿಗೆ ನೀಡಲಾದ ಕಿರುಕುಳದ ಬಗ್ಗೆ ಗೊತ್ತಾಗುತ್ತದೆ. ಬಾಲಕನ ಪರಿಸ್ಥಿತಿ ಮನಕಲಕುವಂತಿದೆ.

ನಡೆದಿದ್ದೇನು?: ಬಾಲಕ ರಾಜ್‍ಗೆ 10 ವರೆಗೆ ಎಣಿಸುವಂತೆ ತಂದೆ ಧರ್ಮೇಂದ್ರ ಹೇಳಿದ್ದಾನೆ. ಆದ್ರೆ ಬಾಲಕನಿಗೆ ಎಣಿಸಲು ಬಂದಿಲ್ಲ. ಇಷ್ಟಕ್ಕೇ ರೌದ್ರಾವತಾರ ತಾಳಿದ ಧರ್ಮೇಂದ್ರ 3 ವರ್ಷದ ಬಾಲಕನನ್ನ ತಲೆಕೆಳಗಾಗಿ ನೇತು ಹಾಕಿ ಮನಬಂದಂತೆ ಹೊಡೆದಿದ್ದಾನೆ. ತಾಯಿ ಬುಲ್‍ಬುಲ್ ಮಧ್ಯಪ್ರವೇಶಿಸಿದಾಗ ಆಕೆಗೂ ಥಳಿಸಿದ್ದಾನೆ. ಬುಲ್‍ಬುಲ್ ಕಿರುಚಾಟವನ್ನು ಕೇಳಿ ಅಕ್ಕಪಕ್ಕದ ಮನೆಯವರು ಓಡಿಬಂದಿದ್ದು, ಧರ್ಮೇಂದ್ರ ಅವರನ್ನೂ ಹೊರಕಳಿಸಿದ್ದಾನೆ.

ಧರ್ಮೇಂದ್ರನ ವರ್ತನೆ ಮಿತಿಮೀರಿ ಮುಗ್ಧ ಬಾಲಕನ ಮೇಲೆ ಕಿರುಕುಳ ನೀಡ್ತಿದ್ದನ್ನು ನೋಡಿ ಸ್ಥಳೀಯರು 100ಕ್ಕೆ ಕರೆ ಮಾಡಿದ್ದಾರೆ. ಪೊಲೀಸರು ಬಂದ ಕೂಡಲೇ ಧರ್ಮೇಂದ್ರ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ತಲೆ, ಕಣ್ಣು, ತುಟಿ ಹಾಗೂ ಹೊಟ್ಟೆಯ ಭಾಗದಲ್ಲಿ ಗಾಯಗಳಾಗಿ ರಕ್ತಸ್ರಾವವಾಗ್ತಿದ್ದ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಸದ್ಯ ಬಾಲಕ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

ನಿರ್ದಯಿ ತಂದೆ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ತನ್ನ ಗಂಡನಿಗೆ ಮತ್ತೊಬ್ಬ ಹೆಂಡತಿಯಿದ್ದಾಳೆ ಎಂದು ಬುಲ್‍ಬುಲ್ ಹೇಳಿದ್ದಾರೆ. ಗಂಡನ ಕಿರುಕುಳದ ಬಗ್ಗೆ ಈ ಹಿಂದೆಯೂ ಪೊಲೀಸರಿಗೆ ದೂರು ನೀಡಿದ್ದ ಎಂದು ಅವರು ತಿಳಿಸಿದ್ದಾರೆ.

Advertisement
Advertisement