ಕೊಪ್ಪಳ: ಕಾರ್ಖಾನೆಯೊಂದು ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಬೋರ್‍ವೆಲ್ ಮೂಲಕ ಅನಧಿಕೃತ ನೀರು ಕದಿಯುತ್ತಿರೋ ಸ್ಥಳಕ್ಕೆ ರೈತರು ನುಗ್ಗಿ ಕಾರ್ಖಾನೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮದ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಬೋರವೆಲ್ ಕೊರೆಯಿಸಿ ಕಳೆದ ನಾಲ್ಕೈದು ತಿಂಗಳಿಂದ ಕಲ್ಯಾಣಿ ಕಾರ್ಖಾನೆಯವರು ಅಂತರ್ಜಲಕ್ಕೂ ಕನ್ನಾ ಹಾಕಿ ನೀರು ಕದಿಯುತ್ತಿದ್ದಾರೆ. ನಾಲ್ಕೈದು ಬೋರ್‍ವೆಲ್ ಗಳಿಗೆ ಡೀಸೆಲ್ ಮೋಟರ್ ಅಳವಡಿಸಿ ನಿರಂತರವಾಗಿ ಟ್ಯಾಂಕರ್ ಮೂಲಕ ನೀರು ಕದಿಯುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇದ್ರಿಂದ ರೋಸಿಹೋದ ರೈತರು ಡಿಸೇಲ್ ಪಂಪಸೆಟ್ ಮೂಲಕ ನೀರು ಕದಿಯುತ್ತಿರೋದನ್ನ ನಿಲ್ಲಿಸುವಂತೆ ಕಾರ್ಖಾನೆಯವರಿಗೆ ತಾಕೀತು ಮಾಡಿದ್ದಾರೆ.
Advertisement
ಇನ್ನು ಈ ರೀತಿ ಕಲ್ಯಾಣಿ ಸ್ಟೀಲ್ ಕಾರ್ಖಾನೆಯವರು ನಿರಂತರವಾಗಿ ನೀರು ಕದಿಯುತ್ತಿರುವುದರಿಂದ ಸುತ್ತಮುತ್ತಲು ರೈತರ ಜಮೀನಿನಲ್ಲಿ ಇರುವ ಬೋರ್‍ವೆಲ್ ನೀರು ಕಡಿಮೆ ಆಗಿ ಬೆಳೆಗೆ ನೀರು ಹಾಯಿಸಲು ಪರದಾಡ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಕಾರ್ಖಾನೆಯವರು ನೀರು ಕದಿಯೋದನ್ನ ತಡೀಬೇಕು. ಜನಜಾನುವಾರುಗಳಿಗೆ ಕುಡಿಯೋಕೆ ನೀರಿಲ್ಲ. ಇದ್ರ ಮಧ್ಯೆ ಕಾರ್ಖಾನೆಯವರು ನೀರು ಕದಿಯುತ್ತಿರೋದನ್ನ ಕಂಡು ಅಧಿಕಾರಿಗಳು ಕಣ್ಮುಚ್ಚಿ ಕುಳ್ತಿದ್ದಾರೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.