ಬೆಳಗಾವಿ: ಚುನಾವಣೆ ಹೊಸ್ತಿಲಲ್ಲಿ ಬೆಳಗಾವಿ (Belagavi) ಬಿಜೆಪಿ (BJP) ನಾಯಕರ ಭಿನ್ನಮತ ಮುಂದುವರಿದಿದ್ದು, ಗೃಹ ಸಚಿವ ಅಮಿತ್ ಶಾ (Amit Shah) ಬಂದು ಪಾಠ ಮಾಡಿದರೂ ಬಿಜೆಪಿ ನಾಯಕರ ಮುನಿಸು ಮಾತ್ರ ತಣ್ಣಗಾಗಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಬ್ರದರ್ಸ್ (Jarkiholi Brothers) ವರ್ಸಸ್ ಅದರ್ಸ್ ಸ್ಥಿತಿ ಮುಂದುವರಿದಿದೆ.
ಬೆಳಗಾವಿ ಜಿಲ್ಲೆ ಗೋಕಾಕ್, ಮೂಡಲಗಿ ವಿಜಯ ಸಂಕಲ್ಪ ಯಾತ್ರೆಗೆ ಜಿಲ್ಲೆಯ ಬಿಜೆಪಿ ಲಿಂಗಾಯತ ನಾಯಕರು ಗೈರಾಗಿದ್ದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ ಗೈರಾಗಿದ್ದಾರೆ. ರಮೇಶ್ ಜಾರಕಿಹೊಳಿ (Ramesh Jarkiholi) – ಲಕ್ಷ್ಮಣ್ ಸವದಿ (Laxman Savadi) ಮಧ್ಯೆ ಮುಸುಕಿನ ಗುದ್ದಾಟ ಇದ್ದರೆ ಮತ್ತೊಂದೆಡೆ ಜಾರಕಿಹೊಳಿ ಸಹೋದರರ ವಿರುದ್ಧ ಟ್ವೀಟ್ ಮೂಲಕ ಈರಣ್ಣ ಕಡಾಡಿ (Eranna Kadadi) ಅಸಮಾಧಾನ ಹೊರಹಾಕಿದ್ದಾರೆ.
Advertisement
Advertisement
ಇತ್ತೀಚೆಗೆ ಬೆಳಗಾವಿಯ ನ್ಯೂ ಸರ್ಕ್ಯೂಟ್ ಹೌಸ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಬಿಜೆಪಿ ನಾಯಕರ ಜಂಟಿ ಸುದ್ದಿಗೋಷ್ಠಿ ಕರೆಯಲಾಗಿತ್ತು. ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಸಚಿವರಾದ ಸಿಸಿ ಪಾಟೀಲ್, ಬೈರತಿ ಬಸವರಾಜ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಮಂಗಲ ಅಂಗಡಿ ಸೇರಿ ಹಲವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Advertisement
ಈ ವೇಳೆ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಗೋವಿಂದ ಕಾರಜೋಳ ಬಳಿಕ ಬೇರೆಯವರು ಮಾತನಾಡಿ ಎಂದು ಮಾಧ್ಯಮಗಳ ಮೈಕ್‌ಗಳ ಎದುರುಗಡೆಯ ಚೇರ್ ಮೇಲಿಂದ ಎದ್ದಿದ್ದರು. ಆಗ ರಮೇಶ್ ಜಾರಕಿಹೊಳಿಗೆ ಮಾತನಾಡಲು ಮಾಧ್ಯಮದವರು ಹೇಳಿದಾಗ ಮಾತನಾಡಲ್ಲ ಎಂದು ತಿಳಿಸಿದರು. ಬಳಿಕ ಲಕ್ಷ್ಮಣ್ ಸವದಿಗೆ ಮಾತನಾಡಲು ಗೋವಿಂದ ಕಾರಜೋಳ ಕರೆಯುತ್ತಿದ್ದಂತೆ ಸುದ್ದಿಗೋಷ್ಠಿಯಿಂದ ರಮೇಶ್ ಜಾರಕಿಹೊಳಿ ಹೊರನಡೆದರು.
Advertisement
ಮತ್ತೊಂದೆಡೆ ಗೋಕಾಕ್‌ನಲ್ಲಿ ಜಾರಕಿಹೊಳಿ ಬ್ರದರ್ಸ್ ವರ್ಸಸ್ ಈರಣ್ಣ ಕಡಾಡಿ ಎಂಬ ಸ್ಥಿತಿಯಿದೆ. ಗೋಕಾಕ್, ಅರಭಾವಿಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಿಗೆ ಆಹ್ವಾನಿಸದ್ದಕ್ಕೆ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ವಿರುದ್ಧ ಟ್ವೀಟ್ ಮಾಡಿ ಈರಣ್ಣ ಕಡಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಧ್ವನಿ ಎತ್ತಿದ್ದ ರಮೇಶ್ ಜಾರಕಿಹೊಳಿ ಬಗ್ಗೆ ಪರೋಕ್ಷವಾಗಿ ಟೀಕೆ ಮಾಡಿದ್ದರು.
ಕಳೆದ ಕೆಲ ದಿನಗಳ ಹಿಂದೆ ಗೋಕಾಕ್ ತಾಲೂಕಿನಲ್ಲಿ ಘಟ್ಟಿ ಬಸವಣ್ಣ ಅಣೆಕಟ್ಟು ನಿರ್ಮಾಣಕ್ಕೆ ಭೂಮಿ ಪೂಜೆ, ಮಾರ್ಕಂಡೇಯ ನದಿಗೆ ಅಡ್ಡಲಾಗಿ ಯೋಗಿಕೊಳ್ಳದ ಬಳಿ ನಿರ್ಮಾಣವಾಗುತ್ತಿರುವ ಡ್ಯಾಂ, ಮಾಜಿ ಸಚಿವ ರಮೇಶ್ ಜಾರಕಿಹೊಳಿಯಿಂದ 969 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಡ್ಯಾಂ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರವನ್ನು ರಮೇಶ್ ಜಾರಕಿಹೊಳಿ ಪಾಲನೆ ಮಾಡಿರಲಿಲ್ಲ. ಅಳಿಯ, ಪುತ್ರನ ಜೊತೆಗೂಡಿ ಕಾರ್ಯಕ್ರಮ ನಡೆಸಿದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ನಡೆಯನ್ನು ಟ್ವೀಟ್ ಮೂಲಕ ಈರಣ್ಣ ಕಡಾಡಿ ಖಂಡಿಸಿದ್ದರು. ಇದನ್ನೂ ಓದಿ: ಸಿಎಂ ರಾಜೀನಾಮೆ ಕೊಡಬೇಕು- ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ವಿರೋಧಿ ಪಕ್ಷದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘಿಸುತ್ತಾರೆ ಎಂದು ಹೇಳುವ ನೀವು ತಮ್ಮದೇ ಪಕ್ಷದ ಸಂಸದರನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ಜೊತೆಗೂಡಿಸಿಕೊಂಡು ಹೋಗದಿರುವ ನಮ್ಮ ಹೃದಯ ವೈಶಾಲ್ಯತೆಗೆ ಜನ ಏನಂದಾರು ಎಂಬ ಕನಿಷ್ಠ ಜ್ಞಾನವಿರಬೇಕು. ಪರಿವಾರ ವಾದವನ್ನು ವಿರೋಧಿಸುವ ಮೌಲ್ಯಾಧಾರಿತ ಪಕ್ಷಕ್ಕೆ ನಾವೇ ಒಂದು ಕಳಂಕವಾಗಬಾರದು. ವ್ಯಕ್ತಿಯೊಬ್ಬರ ತೆವಲಿಗೆ ಪಕ್ಷ ಕೂಡ ಮಣೆ ಹಾಕುವ ಅಗತ್ಯವಿಲ್ಲ. ಇಂತಹವರ ಪ್ರಜಾ ವಿರೋಧಿ ನೀತಿಗಳ ಬಗ್ಗೆ ಜಾಣ ಕುರುಡುತನ ತೋರುವ ನಮ್ಮ ನಾಯಕರು ಭಾರೀ ಬೆಲೆ ತೆರಬೇಕಾದೀತು ಎಂದು ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದರು.
ಈರಣ್ಣ ಕಡಾಡಿ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ್ದ ರಮೇಶ್ ಜಾರಕಿಹೊಳಿ, ಅದು ಸರ್ಕಾರಿ ಕಾರ್ಯಕ್ರಮ ಅಲ್ಲ. ನಾನು ಖಾಸಗಿಯಾಗಿ ಮಾಡಿದ್ದೇನೆ. ಸಿಎಂ ಅನುಮತಿ ಪಡೆದು ನಾನು ಖಾಸಗಿಯಾಗಿ ಕಾರ್ಯಕ್ರಮ ಮಾಡಿದ್ದೇನೆ. ಆಮಂತ್ರಣ ಪತ್ರಿಕೆ ಮುದ್ರಿಸಿರಲಿಲ್ಲ. ರಾಜ್ಯಸಭಾ ಸದಸ್ಯರಿಗೆ ಅಷ್ಟು ಬುದ್ಧಿ ಇಲ್ಲ ಎಂದರೆ ಏನೂ ಮಾಡಲು ಸಾಧ್ಯವಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು.
ರಮೇಶ್ ಹೇಳಿಕೆಯ ವೀಡಿಯೋ ಟ್ವೀಟ್ ಮಾಡಿ ಮತ್ತೆ ಅಸಮಾಧಾನ ಹೊರಹಾಕಿದ ಈರಣ್ಣ ಕಡಾಡಿ, 969 ಕೋಟಿ ರೂ. ಸರ್ಕಾರಿ ಯೋಜನೆ ಲಕ್ಷಾಂತರ ರೂ. ಪತ್ರಿಕೆಗೆ ಜಾಹೀರಾತು ನೀಡಿ ಶಾಸಕರು ಖಾಸಗಿ ಪೂಜೆ ಮಾಡಬಹುದು ಎಂಬ ಸತ್ಯ ಅತಿ ಬುದ್ಧಿವಂತರಿಂದ ನನಗೆ ತಿಳಿಯಿತು. ಬುದ್ಧಿ ಇಲ್ಲದವರೆಲ್ಲರೂ ಇದನ್ನು ಅರ್ಥ ಮಾಡಿಕೊಳ್ಳಬೇಕು. ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ಈರಣ್ಣ ಕಡಾಡಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಆದರೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಬೆಳಗಾವಿ ನಾಯಕರ ಭಿನ್ನಮತ ತಲೆನೋವಾಗುವ ಸಾಧ್ಯತೆಗಳು ಹೆಚ್ಚಿವೆ. ಇದನ್ನೂ ಓದಿ: ಬಿಜೆಪಿಯ ನಾಲ್ಕೈದು ಶಾಸಕರಿಗೆ ಟಿಕೆಟ್ ಇಲ್ಲ- ಆಕಾಂಕ್ಷಿಗಳಿಗೆ ಬಿಎಸ್‍ವೈ ಶಾಕ್