ಯುಕೆಯ ಪ್ರತಿಷ್ಠಿತ ಪ್ರಶಸ್ತಿ ರೇಸ್‍ನಲ್ಲಿದೆ ಭಾರತದ ‘ಏಕತಾ ಪ್ರತಿಮೆ’

Public TV
2 Min Read
statue of unity 1

ಲಂಡನ್: ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ್‍ಭಾಯಿ ಪಟೇಲ್ ಅವರ ‘ಏಕತಾ ಪ್ರತಿಮೆ’ ಬ್ರಿಟನ್ ಮೂಲದ ಇನ್‌ಸ್ಟಿಟ್ಯೂಷನ್ ಆಫ್ ಸ್ಟ್ರಕ್ಚರಲ್ ಇಂಜಿನಿಯರ್ಸ್ ನೀಡುವ ಪ್ರತಿಷ್ಠಿತ ‘ದಿ ಸ್ಟ್ರಕ್ಚರಲ್ ಅವಾರ್ಡ್ 2019’ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಹೌದು, ಪ್ರಪಂಚದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಪಡೆದಿರುವ ಏಕತಾ ಪ್ರತಿಮೆ ವಿದೇಶಿ ಪ್ರಶಸ್ತಿ ರೇಸ್‍ನಲ್ಲಿರುವುದು ಹೆಮ್ಮೆಯ ವಿಷಯವಾಗಿದೆ. ನರ್ಮದಾ ನದಿ ಮೇಲೆ ಏಕತಾ ಪ್ರತಿಮೆ ತಲೆಯತ್ತಿ ನಿಂತಿದೆ. ಬೃಹತ್ ಗಾತ್ರ ಹಾಗೂ ನಿರ್ಮಾಣವಾದ ಸ್ಥಳ ಏಕತಾ ಪ್ರತಿಮೆ ವಿಶೇಷತೆಯನ್ನು ಹೆಚ್ಚಿಸಿದೆ. ಈ ಪ್ರತಿಮೆಯನ್ನು ರಚನೆ ಮಾಡಿ, ನಿರ್ಮಿಸಿದ ಇಂಜಿನಿಯರ್ ಗಳು ಕಠಿಣ ಸಲವಾಲುಗಳನ್ನು ಎದುರಿಸಿದ್ದಾರೆ. ಇದು ಅದ್ಭುತ ರಚನೆಯನ್ನು ಹೊಂದಿದೆ ಎಂದು ತೀರ್ಪುಗಾರರ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.

sardar patel statue 2

ಸುಮಾರು 52 ವರ್ಷಗಳಿಂದ ಸಂಸ್ಥೆಯು ದಿ ಸ್ಟ್ರಕ್ಚರಲ್ ಅವಾರ್ಡ್ ನೀಡುವ ಪದ್ಧತಿಯನ್ನು ನಡೆಸಿಕೊಂಡು ಬಂದಿದೆ. ಈ ಪ್ರಶಸ್ತಿಯ 2019ರ ಪಟ್ಟಿಯಲ್ಲಿ ಏಕತಾ ಪ್ರತಿಮೆ ಸೇರಿ ಸುಮಾರು 49 ಅದ್ಭುತ ಹಾಗೂ ವಿಶೇಷ ರಚನೆಯುಳ್ಳ ಕಟ್ಟಡ, ಪ್ರತಿಮೆಗಳು ಕೂಡ ಸ್ಥಾನ ಪಡೆದಿದೆ. ಚೀನಾದ ಹಾಂಗ್ಜೌನಲ್ಲಿ ತಿರುಗುವ ಪ್ಯಾನಲ್‍ಗಳಿಂದ ನಿರ್ಮಿಸಿದ ಕ್ರೀಡಾಂಗಣ, ಲಂಡನ್‍ನಲ್ಲಿ ನೆಲದಿಂದ 22 ಮೀಟರ್ ಆಳದಲ್ಲಿ ನಿರ್ಮಿಸಿರುವ ಪಂಚತಾರಾ ಹೋಟೆಲ್ ಸೇರಿದಂತೆ ವಿಶ್ವದೆಲ್ಲೆಡೆಯ 49 ರಚನೆಗಳು ಪ್ರಶಸ್ತಿಯ ರೇಸ್‍ನಲ್ಲಿ ಇದೆ. ಈ ಪ್ರಶಸ್ತಿ ನವೆಂಬರ್ 15ರಂದು ಘೋಷಣೆ ಆಗಲಿದೆ.

ಏಕತಾ ಪ್ರತಿಮೆ ಅಹಮದಾಬಾದ್ ನಿಂದ 200 ಕಿ.ಮೀ ದೂರದಲ್ಲಿರುವ ಸರ್ದಾರ್ ಸರೋವರ ಅಣೆಕಟ್ಟಿನ ಬಳಿ ನಿರ್ಮಾಣವಾಗಿದೆ. ನರ್ಮದಾ ಜಿಲ್ಲೆಯ ನರ್ಮದಾ ಡ್ಯಾಮ್‍ನಿಂದ 3.2 ಕಿ.ಮೀ ದೂರದಲ್ಲಿರುವ ‘ಸಾಧು ಬೆಟ್’ ದ್ವೀಪದಲ್ಲಿ ಯೋಜನಾ ಸ್ಥಳವಿದೆ. ಅಕ್ಟೋಬರ್ 31ರಂದು ಸರ್ದಾರ್ ವಲ್ಲಭ್‍ಭಾಯಿ ಪಟೇಲ್ ಅವರ ಜನ್ಮದಿನ. ಹೀಗಾಗಿ ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆಯನ್ನು ಅನಾವರಣ ಮಾಡಿದ್ದರು.

sardar patel statue 1

ಈ ಏಕತಾ ಪ್ರತಿಮೆ 182 ಮೀಟರ್ ಎತ್ತರವಿದ್ದು, ಇದಕ್ಕೆ 2 ಸಾವಿರದ 300 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. 25 ಸಾವಿರ ಟನ್ ಕಬ್ಬಿಣ ಬಳಕೆ ಮಾಡಲಾಗಿದ್ದು, 90 ಸಾವಿರ ಟನ್ ಸಿಮೆಂಟ್ ಬಳಕೆ ಮಾಡಲಾಗಿದೆ. ಇದಕ್ಕಾಗಿ 250 ಎಂಜಿನಿಯರ್ಸ್, 3,400 ಕಾರ್ಮಿಕರು ಬರೋಬ್ಬರಿ 33 ತಿಂಗಳ ಕಾಲ ಶ್ರಮವಹಿಸಿದ್ದಾರೆ. ಲೋಹ ಅಭಿಯಾನದ ಮೂಲಕ 1.69 ಲಕ್ಷ ಲೋಹದ ತುಣುಕುಗಳನ್ನು ದೇಶದೆಲ್ಲೆಡೆಯಿಂದ ಸಂಗ್ರಹಿಸಲಾಗಿತ್ತು. ಏಕತಾ ಪ್ರತಿಮೆ ಭಾರತದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ತನ್ನ ವಿಶೇಷತೆಯಿಂದ ಇಂದು ಬ್ರಿಟನ್‍ನ ಪ್ರತಿಷ್ಠ ಪ್ರಶಸ್ತಿಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *