ನವದೆಹಲಿ: ಲಾಕ್‍ಡೌನ್ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದ್ದು ಸಭೆ ಬಳಿಕ ಲಾಕ್‍ಡೌನ್ ಮುಂದುವರಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಮೂಲಗಳು ಹೇಳಿವೆ.
ಮತ್ತಷ್ಟು ವಿನಾಯ್ತಿಗಳೊಂದಿಗೆ ಮೇ 15ರವರೆಗೂ ಲಾಕ್‍ಡೌನ್ ಮುಂದುವರಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಅಧಿಕೃತ ಆದೇಶ ಹೊರ ಬರಬೇಕಿದೆ. ಈ ವಾರದ ಅಂತ್ಯದಲ್ಲಿ ಪ್ರಧಾನಿ ಮೋದಿ ದೇಶದ ಜನರನ್ನುದ್ದೇಶಿಸಿ ಐದನೇ ಬಾರಿ ಮಾತನಾಡಿಲಿದ್ದು, ಈ ವೇಳೆ ಲಾಕ್‍ಡೌನ್ ವಿಸ್ತರಣೆ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
Advertisement
Advertisement
ಇಂದಿನ ಸಭೆಯಲ್ಲಿ ಒಂಭತ್ತು ರಾಜ್ಯಗಳಿಗೆ ಮಾತ್ರ ಪ್ರಧಾನಮಂತ್ರಿ ಜೊತೆಗೆ ಮಾತನಾಡಲು ಅವಕಾಶ ನೀಡಲಾಗಿತ್ತು. ಮೇಘಾಲಯ, ಮಿಜೋರಾಂ, ಪುದುಚೇರಿ, ಉತ್ತರಾಖಂಡ, ಹಿಮಾಚಲ ಪ್ರದೇಶ, ಒಡಿಶಾ, ಬಿಹಾರ, ಗುಜರಾತ್, ಹರಿಯಾಣ ಮುಖ್ಯಮಂತ್ರಿಗಳು ಸಭೆಯಲ್ಲಿ ಮಾತನಾಡಿದರು ಬಾಕಿ ಎಲ್ಲ ರಾಜ್ಯಗಳ ಸಿಎಂ ಗಳು ಪತ್ರ ಮೂಲಕ ತಮ್ಮ ವರದಿ ಮತ್ತು ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿದರು.
Advertisement
Advertisement
ಸಭೆಯಲ್ಲಿ ಮಾತನಾಡಿದ ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ತುರ್ತು ಅವಶ್ಯಕತೆಗಳ ವಿನಾಯಿತಿಯೊಂದಿಗೆ ಲಾಕ್‍ಡೌನ್ ಮುಂದುವರಿಸಿ. ವೈದ್ಯಕೀಯ ಅವಶ್ಯಕತೆಗಳು ಹೊರತುಪಡಿಸಿ ಅಂತರ್ ಜಿಲ್ಲೆ, ರಾಜ್ಯಗಳ ಗಡಿ ಬಂದ್ ಮಾಡಿ ಎಂದು ಸಲಹೆ ನೀಡಿದರು. ಮೀಜೊರಾಂ ಸಿಎಂ ಕೇಂದ್ರ ಸರ್ಕಾರದ ನಿಯಮಗಳನ್ನು ಪಾಲಿಸುತ್ತೇವೆ ಎಂದರು.
ಒಡಿಶಾದ ನವೀನ್ ಪಟ್ನಾಯಕ್ ಮಾತನಾಡಿ ಪ್ರಮುಖ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಿ ಲಾಕ್‍ಡೌನ್ ಮುಂದುವರಿಸಬೇಕು. ಸಾರ್ವಜನಿಕ ಸಭೆಗಳು, ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಮತ್ತು ರಾಜ್ಯದ ಒಳಗಿನ ಆರ್ಥಿಕ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಬೇಕು. ಆರ್ಥಿಕತೆಯನ್ನು ಕಿಕ್‍ಸ್ಟಾರ್ಟ್ ಮಾಡಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ರೋಗದ ಲಕ್ಷಣಗಳನ್ನು ಹೊಂದಿರುವ ಜನರನ್ನು ಅಕ್ರಮಣಕಾರಿಯಾಗಿ ಪರೀಕ್ಷಿಸುತ್ತಿದ್ದೇವೆ. ಗಡಿ ರಾಜ್ಯಗಳು ಹೆಚ್ಚು ಪ್ರಕರಣಗಳನ್ನು ವರದಿ ಮಾಡಿವೆ. ಹಿಮಾಚಲದ 12 ಜಿಲ್ಲೆಗಳಿಗೆ ಯಾವುದೇ ಸಕಾರಾತ್ಮಕ ಪ್ರಕರಣಗಳಿಲ್ಲ. ಬಡ ಮತ್ತು ನಿರ್ಗತಿಕರಿಗೆ ಆರ್ಥಿಕವಾಗಿ ನೆರವು ನೀಡಲು ರಾಜ್ಯವು ಸಿದ್ಧವಾಗಿದೆ. ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವ ಸ್ಥಿತಿಯಲ್ಲಿದ್ದೇವೆ. ಇತರೆ ರಾಜ್ಯಗಳ ಅಭಿಪ್ರಾಯವನ್ನು ಸಂಗ್ರಹಿಸಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಿ ಎಂದು ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್ ಹೇಳಿದರು.
ಪುದುಚೇರಿ ಸಿಎಂ ವಿ ನಾರಾಯಣಸ್ವಾಮಿ ಮಾತನಾಡಿ ಪಿಪಿಇ ಕಿಟ್ ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಕೇಂದ್ರ ಸರ್ಕಾರ ಒದಗಿಸಬೇಕು. ಕೊರೊನಾ ವಿರುದ್ಧ ಹೋರಾಟಕ್ಕೆ ಹಣಕಾಸಿನ ನೆರವು ನೀಡಿ. ಮೇ 3ರ ಬಳಿಕ ಲಾಕ್‍ಡೌನ್ ಬಳಿಕ ಕೈಗಾರಿಕೆ ತೆರೆಯಲು ಅವಕಾಶ ನೀಡಿ ಎಂದು ಮನವಿ ಮಾಡಿದರೆ, ಉತ್ತರಾಖಂಡ ಸಿಎಂ ತಿವೇಂದ್ರ ಸಿಂಗ್ ರಾವತ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ವ್ಯಾಪಾರ ವಹಿವಾಟು ಆರ್ಥಿಕತೆ ಪುನಾರಂಭಕ್ಕೆ ಅವಕಾಶ ನೀಡಬೇಕು. ಸರ್ಕಾರ ಹಂತ ಹಂತವಾಗಿ ಸಾಮಾನ್ಯ ಸ್ಥಿತಿಗೆ ತರುವ ಪ್ರಯತ್ನ ಮಾಡಿ ಎಂದು ಕೇಳಿಕೊಂಡರು.
ರಾಜ್ಯಗಳಿಗೆ ಲಾಕ್‍ಡೌನ್ ನಿರ್ಧಾರ?
ಮೇಲಿನ ಎಲ್ಲ ರಾಜ್ಯಗಳ ಜೊತೆಗೆ ಬಹುತೇಕ ರಾಜ್ಯಗಳು ವಿನಾಯತಿ ಜೊತೆಗೆ ಲಾಕ್‍ಡೌನ್ ಮುಂದುವರೆಸಲು ಸೂಚಿಸಿದ ಹಿನ್ನೆಲೆ ಕೇಂದ್ರ ಸರ್ಕಾರ ಲಾಕ್‍ಡೌನ್ ಮುಂದುವರೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಈ ಬಾರಿ ಯಾವ ಪ್ರದೇಶದಲ್ಲಿ ಲಾಕ್‍ಡೌನ್ ಮುಂದುವರಿಸಬೇಕು ಮತ್ತು ವಿನಾಯತಿಗೆ ಒಳಪಡಬೇಕು ಎನ್ನುವುದು ರಾಜ್ಯ ಸರ್ಕಾರ ನಿರ್ಧರಿಸುವ ಸಾಧ್ಯತೆ ಇದೆ. ಹಸಿರು ಕಿತ್ತಳೆ ಮತ್ತು ಕೆಂಪು ವಲಯಗಳ ಆಧಾರ ಮೇಲೆ ರಾಜ್ಯ ಸರ್ಕಾರವೇ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಸೂಚಿಸುವ ಸಾಧ್ಯತೆಯಿದ್ದು ವಲಯವಾರು ಕೇವಲ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಮುಂದೆ ಪ್ರಕಟಿಸಲಿದೆ. ಇದಾದ ಬಳಿಕ ಎಲ್ಲಿ ಯಾವುದಕ್ಕೆ ವಿನಾಯಿತಿ ಸಿಗಲಿದೆ ಎನ್ನುವುದು ಸ್ಪಷ್ಟವಾಗಲಿದೆ.