ಕೊಪ್ಪಳ: ದಸರಾ ಹಬ್ಬ ಆಚರಣೆಯಲ್ಲಿ ನಡೆಯುವ ಆಯುಧ ಪೂಜೆ ಹಿನ್ನೆಲೆಯಲ್ಲಿ ಬಸ್‍ಗಳ ಪೂಜೆಗಾಗಿ ನೀಡಿರುವ ಹಣ ಎಷ್ಟು ಎಂದು ಕೇಳಿದರೆ ಆಶ್ಚರ್ಯವಾಗುತ್ತದೆ. ಜೊತೆಗೆ ಅದು ಅಪಹಾಸ್ಯಕ್ಕೂ ಗುರಿಯಾಗುತ್ತಿದೆ. ರಾಜ್ಯ ಸಾರಿಗೆ ಸಂಸ್ಥೆ ರೂಟ್ ಬಸ್‍ಗಳಿಗೆ ಪೂಜೆ ವೆಚ್ಚವೆಂದು ಕೇವಲ 10 ರೂ ಕೊಟ್ಟಿದೆ.
ಇಂದು ನಡೆಯುವ ಆಯುಧ ಪೂಜೆ ಹಿನ್ನೆಲೆಯಲ್ಲಿ ರೂಟ್ ಬಸ್‍ಗಳಿಗೆ 10 ರೂಪಾಯಿ ಪೂಜಾ ವೆಚ್ಚವನ್ನಾಗಿ ನೀಡಲು ಆದೇಶ ಮಾಡಲಾಗಿದೆ. ಹೀಗಾಗಿ ಆಯಾ ಘಟಕಗಳಿಂದ ರೂಟ್ ಬಸ್‍ಗಳಿಗೆ ಪೂಜಾ ವೆಚ್ಚವಾಗಿ 10 ರೂಪಾಯಿಯನ್ನು ನೀಡಲಾಗಿದೆ. ಸಂಸ್ಥೆ ನೀಡಿರುವ ಈ ಪೂಜಾ ವೆಚ್ಚದ ಭಾರೀ ಮೊತ್ತದಲ್ಲಿ ಏನನ್ನು ಖರೀದಿಸಬೇಕು ಎಂದು ಚಾಲಕರು ಹಾಗೂ ನಿರ್ವಾಹಕರು ಯೋಚನೆ ಮಾಡುವಂತಾಗಿದೆ. ಅಲ್ಲದೆ ಇಷ್ಟೊಂದು ಹಣವನ್ನು ಹೇಗೆ ಖರ್ಚು ಮಾಡಬೇಕು ಎಂದು ಲೆಕ್ಕ ತಿಳಿಯದಂತಾಗಿದ್ದಾರೆ.
ಕೆಲ ಚಾಲಕರು ಹಾಗೂ ನಿರ್ವಾಹಕರು ಆ 10 ರೂಪಾಯಿಯನ್ನು ತೆಗೆದುಕೊಳ್ಳದೆ ಸಂಸ್ಥೆಗೆ ಇರಲಿ ಎಂದು ಬಿಟ್ಟು ಬಂದಿದ್ದಾರೆ. ಸಿಬ್ಬಂದಿಬಡತನದಲ್ಲಿರುವ ನಮ್ಮ ಸಂಸ್ಥೆಗಾಗಿ ಆ 10 ರೂಪಾಯಿ ಜಮೆಯಾಗಲಿ ಎಂದು ಬಿಟ್ಟು ಹೋಗಿದ್ದಾರೆ ಎನ್ನುತ್ತಾರೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 5 ಘಟಕಗಳಿದ್ದು ಕೊಪ್ಪಳ ಘಟಕದ 137, ಕುಷ್ಟಗಿ ಘಟಕದ 97, ಯಲಬುರ್ಗಾ ಘಟಕದ 66, ಗಂಗಾವತಿ ಘಟಕದ 132 ಹಾಗೂ ಕುಕನೂರು ಘಟಕದ 40 ರೂಟ್ ಬಸ್‍ಗಳು ಸೇರಿದಂತೆ ಒಟ್ಟು 472 ರೂಟ್ ಬಸ್‍ಗಳಿಗೆ ತಲಾ 10 ರೂಪಾಯಿಯಂತೆ ಪೂಜಾ ವೆಚ್ಚ 4,720 ರೂಪಾಯಿ ಮಂಜೂರು ಮಾಡಲಾಗಿದೆ.
10 ರೂಪಾಯಿಯಲ್ಲಿ ಈಗ ಮೊಳ ಹೂವು ಬರುವುದಿಲ್ಲ. ಕಳೆದ ಬಾರಿ ಪೂಜಾ ವೆಚ್ಚಕ್ಕಾಗಿ ಕೇವಲ 7 ರೂಪಾಯಿ ನೀಡಲಾಗಿತ್ತು. ಆಗಲೂ ಬಹುತೇಕ ಸಿಬ್ಬಂದಿ ಇದನ್ನು ಸ್ವೀಕರಿಸಿರಲಿಲ್ಲ. ಈ ವರ್ಷ ಉದಾರಭಾವ ತೋರಿ 3 ರೂಪಾಯಿ ಹೆಚ್ಚಳ ಮಾಡಿ ಒಟ್ಟು 10 ರೂಪಾಯಿಯಂತೆ ಪೂಜಾ ವೆಚ್ಚ ನೀಡುತ್ತಿದ್ದಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಸಾರಿಗೆ ಸಂಸ್ಥೆಯ ಪೂಜಾ ವೆಚ್ಚದ ಈ ಆದೇಶ ಈಗ ಅಪಹಾಸ್ಯಕ್ಕೆ ಗುರಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv