Bengaluru City

ಬಿಸಿಲ ಧಗೆ ಡೇಂಜರ್ – ಕೂಲ್ ಆಗೋಕೆ ನೀವೀ ಸುದ್ದಿ ಓದ್ಲೇಬೇಕು!

Published

on

Share this

– ಜನರಿಗೆ ಬಿಸಿಲಾಘಾತದ ಮುನ್ನೆಚ್ಚರಿಕೆ ನೀಡಿದ ರಾಜ್ಯ ಸರ್ಕಾರ

– ಹೀಟ್ ಸ್ಟ್ರೋಕ್ ತಂದೀತು ಜೀವಕ್ಕೇ ಕುತ್ತು

– ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸುತ್ತೋಲೆ

ಪವಿತ್ರ ಕಡ್ತಲ

ಬೆಂಗಳೂರು: ಭೀಕರ ಬಿಸಿಲಿನಿಂದ ಕಂಗೆಡುತ್ತಿರುವ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ತೀವ್ರ ಬಿಸಿಲ ಧಗೆಯ ಮುನ್ನೆಚ್ಚರಿಕೆ ನೀಡಿದೆ. ಸುಡುಬಿಸಿಲಿನ ತಾಪದಿಂದ ಎದುರಾಗಬಹುದಾದ ಅಪಾಯಕಾರಿ ಪರಿಣಾಮಗಳ ಬಗ್ಗೆ ವಿವರಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ರಾಜ್ಯದಲ್ಲಿ ಬೇಸಿಗೆ ತಾಪ ಹೆಚ್ಚುತ್ತಿರುವುದರಿಂದ ಬಯಲು ಸೀಮೆ ಹಾಗೂ ಕರಾವಳಿ ಪ್ರದೇಶದಲ್ಲಿ ಹೀಟ್ ಸ್ಟ್ರೋಕ್ ಹಾಗೂ ಚರ್ಮಕ್ಕೆ ಸಂಬಂಧಿಸಿದ ರೋಗಗಳು ಹೆಚ್ಚಾಗುತ್ತದೆ. ಹೀಗಾಗಿ ಆಯಾಯಾ ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಸರ್ಜನ್, ತಾಲೂಕು ಆಸ್ಪತ್ರೆಗಳಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದೆ.

ಅಧಿಕಾರಿಗಳು ಏನ್ಮಾಡಬೇಕು?: ಕಡ್ಡಾಯವಾಗಿ ರಾಜ್ಯದಲ್ಲಿ ಕುಡಿಯುವ ನೀರಿನ ಮಾದರಿ ಪರೀಕ್ಷೆ ಹಾಗೂ ಕ್ಲೋರಿನೆಷನ್ ಮಾಡಬೇಕು. ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆಗೆ ಒಆರ್‍ಎಸ್, ಐವಿ ದ್ರವ, ಔಷಧಿಗಳ ದಾಸ್ತಾನು ಮಾಡಿಕೊಳ್ಳಬೇಕು. ಹೀಟ್ ಸ್ಟ್ರೋಕ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಅಗತ್ಯ ಚಿಕಿತ್ಸೆಗೆ ಅಡ್ಮಿಟ್ ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಹೀಟ್ ಸ್ಟ್ರೋಕ್ ಎಂದರೇನು?: ಮಳೆ ಬರುವಾಗ ಸಾಂಕ್ರಾಮಿಕ ರೋಗ ಬರುವಂತೆ ಭೀಕರ ತಾಪಮಾನದ ಸಂದರ್ಭದಲ್ಲಿ ಯೂ ಸಾಕಷ್ಟು ಕಾಯಿಲೆ ಬರುತ್ತದೆ. ಹೀಟ್ ಸ್ಟ್ರೋಕ್ ಎಂದರೆ ಶಾಖಾಘಾತ ಅಥವಾ ಬಿಸಿಲಾಘಾತ. ಇದರಿಂದ ಪ್ರಾಣ ಹಾನಿಯಾಗುವ ಸ್ಥಿತಿಯೂ ಇದೆ. ದೇಹವು ಅತಿಯಾದ ಉಷ್ಣತೆಗೆ ಒಡ್ಡಿಕೊಂಡಾಗ ಅದರ ಶಾಖ ನಿಯಂತ್ರಣ ವ್ಯವಸ್ಥೆ ವಿಫಲವಾಗುತ್ತದೆ. ಅತಿ ಹೆಚ್ಚಿನ ಚಟುವಟಿಕೆಯಿಂದ ದೇಹ ಅಥವಾ ಹೊರಗಿನ ಅತಿ ಹೆಚ್ಚಿದ ಉಷ್ಣತೆಯಿಂದ ದೇಹದ ಪ್ರಮುಖ ಅಂಗಗಳು ವಿಫಲವಾಗುತ್ತವೆ. ತುಂಬ ಉಷ್ಣತೆಯ ಪರಿಸರದಲ್ಲಿ ಕೆಲಸ ಮಾಡುವುದು, ಜತೆಗೆ ದ್ರವಾಹಾರ ಸೇವನೆಯ ಕೊರತೆಯು ಇದಕ್ಕೆ ಕಾರಣ. ಸೂರ್ಯನ ತಾಪಮಾನ ಎಫೆಕ್ಟ್ ನಿಂದಾಗಿ ಇಡೀ ದೇಹ ನಿರ್ಜಲೀಕರಣಗೊಳ್ಳುತ್ತದೆ. ಇದ್ರಿಂದ ಅತಿ ಸುಸ್ತು, ತಲೆ ನೋವು ವಾಕರಿಕೆ ಕಾಣಿಸುತ್ತದೆ. ಅಷ್ಟೇ ಅಲ್ಲದೆ ಕೆಲವೊಮ್ಮೆ ಕುಸಿದು ಬಿದ್ದು ಅಂಗಾಂಗಗಳು ನಿಷ್ಕ್ರಿಯಗೊಂಡು ಮಾತು ನಿಂತು ಹೋಗುತ್ತದೆ. ಈ ಸಮತದಲ್ಲಿ ತಡ ಮಾಡದೆ ಆಸ್ಪತ್ರೆಗೆ ಸೇರಿಸಿಕೊಳ್ಳಬೇಕು.

ಲಕ್ಷಣಗಳೇನು?: ಬಿಸಿಲಿನ ತಾಪಮಾನಕ್ಕೆ ವಿಪರೀತ ತಲೆನೋವು, ತಲೆ ಸುತ್ತುವುದು, ಎಷ್ಟೇ ಶೆಖೆಯಿದ್ದರೂ ಬೆವರಿಳಿಯದೆ ಕಾಡುವ ಆಯಾಸ, ಮಾಂಸ ಖಂಡಗಳು ಶಕ್ತಿ ಕಳೆದುಕೊಳ್ಳುವುದು, ವಾಂತಿ ಕಾಣಿಸಿಕೊಳ್ಳುವುದು, ದೇಹದ ಉಷ್ಣತೆ ಮತ್ತು ಹೃದಯ ಬಡಿತ ಹೆಚ್ಚಾಗುವುದು, ದೀರ್ಘವಾದ ತೀವ್ರ ಉಸಿರಾಟ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಇಲ್ಲದಿದ್ದಲ್ಲಿ ಮೂರ್ಚೆ ಬೀಳುವುದು ಅಥವಾ ಪ್ರಜ್ಞೆ ತಪ್ಪಬಹುದು.

ಬಿಸಿಲಾಘಾತ ನಿಮಗಾಗದಿರಲು ಹೀಗೆ ಮಾಡಿ.

1. ಸಡಿಲವಾದ, ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸಿ
2. ಬಿಸಿಲಿನಲ್ಲಿ ಕೆಲಸ ಮಾಡುವಾಗ ಸದಾ ಕೈಗೆಟಕುವಂತೆ ಕುಡಿಯುವ ನೀರು ಜೊತೆಗಿರಲಿ
3. ನಿಧಾನವಾಗಿ, ಧಾರಾಳವಾಗಿ ಉಪ್ಪು ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ, ಪಾನಕ ಕುಡಿಯಿರಿ. ಸಾಫ್ಟ್ ಡ್ರಿಂಕ್‍ಗಳನ್ನು ಯಾವುದೇ ಕಾರಣಕ್ಕೂ ಕುಡಿಯಬೇಡಿ. ಕಾಫಿ, ಟೀ ಸಾಧ್ಯವಾದಷ್ಟೂ ಕಡಿಮೆ ಕುಡಿಯಿರಿ.
4. ಹತ್ತಿಯ ನುಣುಪಾದ ಬಟ್ಟೆ/ಟಿಶ್ಯೂ ಕರವಸ್ತ್ರದಿಂದ ಬೆವರು ಒರೆಸಿ
5. ನೀರು ಮಜ್ಜಿಗೆ/ ಎಳನೀರು ಕುಡಿಯುವುದೂ ಆರೋಗ್ಯಕರ
6. ಬೆಚ್ಚಗಿನ ಮಸಾಲೆ ರಹಿತ ಶುದ್ಧ ಆಹಾರ ಸೇವಿಸಿ
7. ಗಾಳಿಯಾಡುವಂತಹ ಪಾದರಕ್ಷೆಗಳನ್ನೇ ಬಳಸಿ
8. ನಿಮ್ಮ ಜೊತೆಗಿನ ಯಾವುದೇ ವ್ಯಕ್ತಿ ತೊದಲು ಮಾತು ಅಥವಾ ಅರ್ಥ ರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ಅವರನ್ನು ನೆರಳಿಗೆ ಕೊಂಡೊಯ್ಯಿರಿ
9. ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆತ್ತಿ
10. ಆ ವ್ಯಕ್ತಿಯ ಹಣೆ, ಕತ್ತು, ಪಾದ, ತೊಡೆಯ ಭಾಗವನ್ನು ಒದ್ದೆ ಬಟ್ಟೆಯಿಂದ ಒರೆಸಿ
11. ನಿಧಾನವಾಗಿ ಸ್ವಲ್ಪ ಸಕ್ಕರೆ, ಉಪ್ಪು ಬೆರೆತ ನೀರನ್ನು ಕುಡಿಸಿ
12. ಹತ್ತಿರದ ವೈದ್ಯರನ್ನು ಕರೆಸಿ ಅಥವಾ ಆಸ್ಪತ್ರೆಗೆ ಸೇರಿಸಿ

ಬಿಸಿಲಾಘಾತವಾಗಿದ್ರೆ ಹೀಗೆ ಮಾಡಿ!: ಹೀಟ್ ಸ್ಟ್ರೋಕ್ ಗೆ ಒಳಗಾದವರ ಬಟ್ಟೆ, ಪಾದರಕ್ಷೆಗಳನ್ನು ಸಡಿಲಿಸಿ ತೆಗೆಯಿರಿ. ತಂಪಾದ ನೆರಳಿರುವ ಜಾಗಕ್ಕೆ ಸ್ಥಳಾಂತರಿಸಿ ಗಾಳಿ ಹಾಕಿ. ತಣ್ಣಗಿನ ನೀರನ್ನು ಆ ವ್ಯಕ್ತಿಯ ಮೇಲೆ ಸಿಂಪಡಣೆ ಮಾಡಿ. ಯಾವುದೇ ಔಷಧ ನೀಡಬೇಡಿ. ದೇಹವನ್ನು ಅತಿಯಾಗಿ ತಕ್ಷಣ ತಂಪು ಮಾಡಲೇಬೇಡಿ. ಪ್ರಜ್ಞೆ ಬಂದ ಮೇಲೆ ನಿಧಾನವಾಗಿ ಶುದ್ಧವಾದ ನೀರನ್ನು ಸ್ವಲ್ಪ ಸ್ವಲ್ಪವೇ ಕುಡಿಯಿರಿ. ಯಾವುದೇ ಕಾರಣಕ್ಕೂ ಆತುರ ಬೇಡವೇ ಬೇಡ.

ಹೀಗಾದ್ರೆ ಮಾತ್ರ ಡಾಕ್ಟರ್ ನೋಡ್ಲೇಬೇಕು!: ಚರ್ಮ ಕೆಂಪಗಾದರೆ, ಬೆವರಿನ ಪ್ರಮಾಣ ಕಡಿಮೆಯಾದರೆ, ದೇಹದ ಉಷ್ಣತೆ ಜಾಸ್ತಿಯಾದರೆ, ದೀರ್ಘವಾದ ತೀವ್ರವಾದ ಉಸಿರಾಟವಿದ್ದರೆ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದುಕೊಳ್ಳಲೇಬೇಕು.

ಇದನ್ನು ಮಾತ್ರ ಮಾಡಲೇಬೇಡಿ: ಬಿಗಿಯಾದ ಗಾಢ ಬಣ್ಣದ ಬಟ್ಟೆ ಧರಿಸಬೇಡಿ. ಕುಷನ್‍ಯುಕ್ತ ಕುರ್ಚಿಯಲ್ಲಿ ಕುಳಿತುಕೊಳ್ಳಬೇಡಿ. ಬಾಯಾರಿದಾಗ ಕಡ್ಡಾಯವಾಗಿ ನೀರನ್ನು ಕುಡಿಯಿರಿ. ಆದರೆ ಸೋಡಾ, ಸಾಫ್ಟ್ ಡ್ರಿಂಕ್ ಮಾತ್ರ ಬೇಡವೇ ಬೇಡ. ಬೆವರೊರೆಸಲು ಒರಟಾದ ಬಟ್ಟೆ ಉಪಯೋಗಿಸಬೇಡಿ. ಕಾಫಿ, ಟೀ ಅತಿ ಸಕ್ಕರೆ ಅಂಶವುಳ್ಳ ಪಾನೀಯ ಅತಿಯಾಗಿ ಸೇವಿಸಬೇಡಿ. ಬಿಸಿಲಿನ ವೇಳೆ ಮಸಾಲೆಯುಕ್ತ ಆಹಾರ ತಿನ್ನಬೇಡಿ. ಮಾಂಸಾಹಾರ ವರ್ಜಿಸಿ, ಮದ್ಯಪಾನವಂತೂ ಬೇಡವೇ ಬೇಡ. ಬಿಗಿಯಾದ, ಗಾಳಿಯಾದ ಚಪ್ಪಲಿ, ಶೂ ಧರಿಸಬೇಡಿ.

ಹೀಗೂ ಆಗುವ ಸಾಧ್ಯತೆ ಇದೆ: ಬಿಸಿಲಾಘಾತವಾದಾಗ ಎಚ್ಚರ ತಪ್ಪುವುದು ವಯಸ್ಸಾದವರಲ್ಲಿನ ಮೊದಲ ಲಕ್ಷಣ. ಹೀಟ್ ಸ್ಟ್ರೋಕ್ ಹೆಚ್ಚಾದರೆ ಮುಂದೆ ಮಾನಸಿಕ ಗೊಂದಲ, ಹೈಪರ್ ವೆಂಟಿಲೇಷನ್, ಸ್ನಾಯು ಸೆಳೆತ, ಕೈ ಕಾಲುಗಳಲ್ಲಿ ನೋವಿನಿಂದ ಕೂಡಿದ ಹರಿತ, ಸೆಳೆತವಾಗಬಹುದು. ಪರಿಸ್ಥಿತಿ ವಿಪರೀತವಾದರೆ ಕೆಲವು ಬಾರಿ ಕೋಮಾಗೂ ಜಾರಬಹುದು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications