– ಸೋಲುವ ಭೀತಿಯಿಂದ ನನ್ನ ಮೇಲೆ ಎಸಿಬಿ ತನಿಖೆ ನಡೆಸ್ತಿದ್ದಾರೆ ಎಂದ ಜಿಟಿಡಿ
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿದೆ. ಜೊತೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಭೂ ಅವ್ಯವಹಾರದ ಕೇಸಿಗೆ ಮರುಜೀವ ಸಿಕ್ಕಿದ್ದು, ಶಾಸಕ ಜಿ.ಟಿ.ದೇವೇಗೌಡ, ಅವರ ಪುತ್ರ ಸೇರಿದಂತೆ 46 ಮಂದಿಗೆ ಸಂಕಷ್ಟ ಎದುರಾಗಿದೆ.
ಕೆ.ಹೆಚ್.ಬಿ ಕಾಲೋನಿ ಅಕ್ರಮದ ತನಿಖೆ ಕೇಸು ಲೋಕಾಯುಕ್ತದಿಂದ ಎಸಿಬಿಗೆ ವರ್ಗಾವಣೆಯಾಗಿದೆ. ಗೃಹಮಂಡಳಿ ಯೋಜನೆಯಡಿ ಕೆಹೆಚ್‍ಬಿ ಕಾಲೋನಿ ನಿರ್ಮಾಣ ಮಾಡಲಾಗಿದ್ದು, ಇಲವಾಲ ಹೋಬಳಿಯ ಮೂರು ಗ್ರಾಮಗಳ ಭೂ ಖರೀದಿಯಲ್ಲಿ ಅವ್ಯವಹಾರದ ಆರೋಪ ಕೇಳಿಬಂದಿತ್ತು. 2008-09 ಸಾಲಿನಲ್ಲಿ ಭೂ ಖರೀದಿಗೆ ಎಕರೆಗೆ 36.50 ಲಕ್ಷ ನಿಗದಿ ಮಾಡಲಾಗಿತ್ತು. ಆದ್ರೆ ಗುಂಗ್ರಾಲ್ ಛತ್ರ, ನಾಗನಹಳ್ಳಿ ಹಾಗೂ ಯಲಚನಹಳ್ಳಿ ಗ್ರಾಮದ ಜಮೀನುಗಳಿಗೆ 8-10 ಲಕ್ಷ ಹಣ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು.
Advertisement
Advertisement
ಈ ಬಗ್ಗೆ ಲೋಕಾಯುಕ್ತ ಸಂಪೂರ್ಣ ಮಾಹಿತಿ ಕಲೆ ಹಾಕಿ ಸರ್ಕಾರಕ್ಕೆ ವರದಿ ನೀಡಿತ್ತು. ಇದೀಗ ಲೋಕಾಯಕ್ತ ವರದಿ ಆಧಾರದ ಮೇಲೆ ಸರ್ಕಾರ ಎಸಿಬಿಗೆ ಕೇಸು ವರ್ಗಾವಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಜಿ.ಡಿ.ದೇವೆಗೌಡ ಪುತ್ರ ಜಿ.ಟಿ ಹರೀಶ್ ಸೇರಿದಂತೆ 46 ಮಂದಿ ಮೇಲೆ ಎಸಿಬಿ ಎಫ್‍ಐಆರ್ ದಾಖಲಿಸಿದೆ.
Advertisement
ಅಂದು ಜಿ.ಟಿ.ದೇವೆಗೌಡ ಗೃಹಮಂಡಳಿ ಅಧ್ಯಕ್ಷರಾಗಿದ್ದರು. ಇದೀಗ ಶಾಸಕ ಜಿಟಿಡಿ ಸೇರಿದಂತೆ 46 ಮಂದಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಹಳೇ ಕೇಸಿಗೆ ಮರುಜೀವ ನೀಡಿ ಸಿಎಂ ಸಿದ್ದರಾಮಯ್ಯ ವಿರೋಧಿಗೆ ಟಾಂಗ್ ನೀಡಿದ್ದಾರೆ ಎನ್ನಲಾಗಿದೆ.
Advertisement
ಸಿಎಂ ವಿರುದ್ಧ ಭಾಷಣದ ದಿನವೇ ಕೇಸ್ ವರ್ಗಾವಣೆ: ಕೇಸನ್ನ ನವೆಂಬರ್ 7ರಂದೇ ರಾಜ್ಯ ಸರ್ಕಾರ ಎಸಿಬಿಗೆ ವರ್ಗಾಯಿಸಿದೆ. ನ. 7ರಂದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಮಾರಪರ್ವ ಸಮಾವೇಶ ನಡೆದಿತ್ತು. ಅಂದು ಶಾಸಕ ಜಿ.ಟಿ.ದೇವೆಗೌಡ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ ಭಾಷಣ ಮಾಡಿದ್ದರು. ಅಂದೇ ಜಿಟಿಡಿ ವಿರುದ್ಧ ಸರ್ಕಾರ ಕೇಸನ್ನ ಎಸಿಬಿಗೆ ವರ್ಗಾಯಿಸಿದೆ. ಚುನಾವಣೆ ವೇಳೆ ಕೇಸು ವರ್ಗಾವಣೆಯಾಗಿರೋದ್ರಿಂದ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಸೋಲುವ ಭೀತಿಯಿಂದ ಎಸಿಬಿ ತನಿಖೆ: ನಾನು ಚಾಮುಂಡೇಶ್ವರಿಯಲ್ಲೇ ಸ್ಪರ್ಧೆ ಮಾಡೋದು. ಇದನ್ನ ಯಾರಿಂದಲೂ ತಡೆಯಲು ಆಗೋದಿಲ್ಲ ಅಂತ ಜಿ.ಟಿ.ದೇವೇಗೌಡ ಹೇಳಿಕೆ ನೀಡಿದ್ದಾರೆ. ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡ ನನ್ನ ಕಂಡ್ರೆ ಸಿದ್ದರಾಮಯ್ಯಗೆ ಭಯ. ಅವರ ಪ್ರತಿ ಬೆಳವಣಿಗೆಯಲ್ಲೂ ನಾನು ಅವರ ಜೊತೆ ಇದ್ದೆ. ಆದ್ರೆ ಅವರು ಸೋಲುವ ಭೀತಿಯಿಂದ ನನ್ನ ಮೇಲೆ ಎಸಿಬಿ ತನಿಖೆ ನಡೆಸುತ್ತಿದ್ದಾರೆ. ಜಿ.ಟಿ.ದೇವೇಗೌಡ ಒಬ್ಬ ಇಲ್ಲ ಅಂದ್ರೆ ಆ ಕ್ಷೇತ್ರ ಗೆಲ್ಲಬಹುದು ಅಂದ್ಕೊಂಡಿದ್ದಾರೆ. ಬೇಕಾದ್ರೆ ಸಿಬಿಐ ತನಿಖೆಗೂ ಕೊಡಲಿ, ಕಾನೂನು ಹೋರಾಟ ಮಾಡ್ತೀನಿ ಅಂತ ಹೇಳಿದ್ರು.
ನಾನು ಕೆಹೆಚ್‍ಬಿ ಅಧ್ಯಕ್ಷ ಆಗಿದ್ದಾಗ ನನ್ನ ಪುತ್ರ ಲಂಡನ್ ನಲ್ಲಿ ಎಂಎಸ್ ಮಾಡ್ತಿದ್ದ. ಈಗ ನನ್ನ ಮಗನ ಮೇಲೆ ಆರೋಪ ಮಾಡ್ತಾರೆ. ಪಾಪ, ಸಿದ್ದರಾಮಯ್ಯ ಮಕ್ಕಳನ್ನ ಚೆನ್ನಾಗಿ ಇಟ್ಟಿರಲಿ ಆ ದೇವರು ಅಂದ್ರು.
ಇತ್ತ ಎಸಿಬಿ ತನಿಖೆಯಲ್ಲಿ ಯಾವುದೇ ದುರುದ್ದೇಶವಿಲ್ಲ. ಲೋಕಾಯುಕ್ತ ವರದಿ ಆಧರಿಸಿ ಕೇಸ್ ದಾಖಲಿಸಿಕೊಂಡು ಎಸಿಬಿ ತನಿಖೆ ನಡೆಸ್ತಿದೆ ಅಂತಾ ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.