ಯಾದಗಿರಿ: ಸರ್ಕಾರ ಪ್ರತಿ ಮನೆಗೆ ಸಾವಿರಾರು ರೂಪಾಯಿ ನೀಡಿ, ಸಾರ್ವಜನಿಕರಿಗೆ ಮನೆಗೊಂದು ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ ಇದನ್ನು ಬಳಸಲು ಸಾರ್ವಜನಿಕರು ನಿರ್ಲಕ್ಷ್ಯ ವಹಿಸುತ್ತಿದ್ದು, ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ವಿಜಯ ಭಾಸ್ಕರ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಯಾದಗಿರಿ ಜಿಲ್ಲೆಯ ಪ್ರವಾಸದಲ್ಲಿರುವ ವಿಜಯ್ ಭಾಸ್ಕರ್, ಇಂದು ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆಗೆ ಆಗಮಿಸಿದ್ದರು. ಈ ವೇಳೆ ಬಂದಳ್ಳಿ ಗ್ರಾಮದ ಮಾರ್ಗ ಮಧ್ಯೆ ಬಹಿರ್ದೆಸೆಗೆ ಹೋಗುತ್ತಿದ್ದ ವ್ಯಕ್ತಿಯನ್ನು ಕಂಡು ತಮ್ಮ ವಾಹನ ನಿಲ್ಲಿಸಿ, ವ್ಯಕ್ತಿಯನ್ನು ತಡೆದು ಶೌಚಾಲಯ ಬಳಕೆ ಬಗ್ಗೆ ಪಾಠ ಮಾಡಿದ್ದಾರೆ.
Advertisement
Advertisement
ಈ ಗ್ರಾಮದಲ್ಲಿ ಗ್ರಾ.ಪಂ ವತಿಯಿಂದ ಮನೆಗೊಂದು ಶೌಚಾಲಯ ನಿರ್ಮಾಣ ಮಾಡಲಾಗಿದೆ. ಅದನ್ನು ಬಳಸಲು ಗ್ರಾಮಸ್ಥರು ಆಸಕ್ತಿ ತೋರುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಶೌಚಾಲಯ ಬಳಸದಿದ್ದರೆ ಪಡಿತರ ಚೀಟಿ, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ವಿಜಯ್ ಭಾಸ್ಕರ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರ ನೀಡಿದ ಪ್ರೋತ್ಸಾಹ ಧನ ಮರುಪಾವತಿ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಜಯ್ ಭಾಸ್ಕರ್ ಜೊತೆ ಧ್ವನಿಗೂಡಿಸಿದ, ಜಿ.ಪಂ ಸಿಇಓ ಶಿಲ್ಪಾ ಶರ್ಮಾ ಮತ್ತು ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಶೌಚಾಲಯ ಬಳಕೆ ಬಗ್ಗೆ ಗ್ರಾಮಸ್ಥರಿಗೆ ತಿಳಿ ಹೇಳಿದರು.