– ರೈತರ ಖಾತೆಗೆ ನೇರ ಹಣ ಜಮಾವಣೆ
ಬೆಂಗಳೂರು: ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ರೈತರಿಗೆ ರಾಜ್ಯ ಸರ್ಕಾರ ನೆರವು ನೀಡಲು ಮುಂದಾಗಿದೆ. ರಾಜ್ಯದ 26 ಜಿಲ್ಲೆಗಳ 10 ಲಕ್ಷ ರೈತರಿಗೆ 671 ಕೋಟಿ ಹಣ ಬಿಡುಗಡೆ ಮಾಡಿದ್ದು, ಬೆಳೆನಷ್ಟ ವಿಮೆ ಪರಿಹಾರ ಹಣ ರೈತರ ಖಾತೆಗೆ ನೇರವಾಗಿ ಜಮೆಯಾಗಲಿದೆ.
Advertisement
ದೇಶದಲ್ಲೇ ಮೊದಲ ಬಾರಿಗೆ ರೈತರ ಖಾತೆಗೆ ಬೆಳೆಹಾನಿ ಪರಿಹಾರ ನೇರ ಜಮೆ ತಂತ್ರಾಂಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸೌಧದಲ್ಲಿ ಚಾಲನೆ ನೀಡಿದ್ದಾರೆ. ಮೊದಲು ಯಾದಗಿರಿ ಜಿಲ್ಲೆಯ ರೈತರಿಗೆ ಪರಿಹಾರ ಹಣ ಜಮೆ ಮಾಡುವ ಮೂಲಕ ಚಾಲನೆ ನೀಡಿದ ಸಿಎಂ, ಮಳೆ ಆಶ್ರಿತ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‍ಗೆ 6800 ರೂ., ನೀರಾವರಿ ಅಶ್ರಿತ ಬೆಳೆ ಹಾನಿಗಾಗಿ ಪ್ರತಿ ಹೆಕ್ಟೇರ್‍ಗೆ 13500 ರೂ., ಬಹು ವಾರ್ಷಿಕ ಬೆಳೆ ಹಾನಿಗಾಗಿ ಪ್ರತಿ ಹೆಕ್ಟೇರ್‍ಗೆ 1800 ರೂ. ಬಿಡುಗಡೆಯಾಗಿದ್ದು, ಈ ಪರಿಹಾರ ಹಣ ಎರಡೇ ಗಂಟೆಯಲ್ಲಿ ರೈತರ ಖಾತೆಗೆ ಜಮೆಯಾಗಲಿದೆ ಅಂತಾ ಹೇಳಿದ್ದಾರೆ.
Advertisement
ರೈತರ ಅಕೌಂಟ್‍ಗೆ ನೇರ ಜಮೆ: ಬೆಳೆ ನಷ್ಟ ಪರಿಹಾರ ವಿತರಣೆಯಿಂದ 9 ಲಕ್ಷ 68 ಸಾವಿರ ರೈತರು ಅನುಕೂಲ ಪಡೆಯಲಿದ್ದಾರೆ. ಒಟ್ಟು 26 ಲಕ್ಷ ಹೆಕ್ಟೇರ್ ಪ್ರದೇಶ ತೀವ್ರ ಬರಗಾಲದಿಂದ ಹಾಳಾಗಿದೆ. ಕೇಂದ್ರ ಸರಕಾರದಿಂದ ಉಳಿದ ಪರಿಹಾರ ಹಣ ಬಂದ ಕೂಡಲೇ ರೈತರ ಅಕೌಂಟ್ ಗೆ ತಲುಪಿಸಲಾಗುವುದು. ಈ ತಂತ್ರಜ್ಞಾನದಿಂದ ಮಧ್ಯವರ್ತಿಗಳ ಕಾಟ ಇರೋದಿಲ್ಲ. ರೈತರಿಗೆ ಕಾಟ ನೀಡೋರು ಯಾರು ಇರೋದಿಲ್ಲ. ಈಗ ನೇರವಾಗಿ ರೈತರ ಅಕೌಂಟ್‍ಗೆ ಪರಿಹಾರ ಹಣ ತಲುಪುತ್ತೆ. ಹಣ ಹಾಕಿದ ಬಳಿಕ ರೈತರಿಗೆ ಮೆಸೇಜ್ ಹೋಗುತ್ತೆ ಅಂತಾ ವಿವರಿಸಿದ್ರು.
Advertisement
Advertisement
ಮೊದಲ ಹಂತದ ಪರಿಹಾರ: ಕೇಂದ್ರದ 450, ರಾಜ್ಯದ 271ಕೋಟಿ ಮೊತ್ತ ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಣೆ ಮಾಡಬೇಕೆಂದಿದೆ. ಆದ್ರೆ ಕೇಂದ್ರ ಇನ್ನೂ ಪೂರ್ಣ ಹಣ ಬಿಡುಗಡೆ ಮಾಡಿಲ್ಲ. ಆದರೆ ವಿಳಂಬ ಆಗಬಾರದೆಂದು ಪರಿಹಾರ ವಿತರಣೆ ಮಾಡುತ್ತಿದ್ದೇವೆ. ಇದು ಮೊದಲ ಹಂತದ ಪರಿಹಾರ ವಿತರಣೆ ಅಷ್ಟೇ. ಕೇಂದ್ರ ಪೂರ್ಣ ಹಣ ಕೊಟ್ಟ ಬಳಿಕ ಮತ್ತೆ ಬರಪರಿಹಾರ ವಿತರಣೆ ಮಾಡ್ತೀವಿ ಅಂತಾ ಸಿಎಂ ಹೇಳಿದ್ರು.
ಸಿಎಂ ವ್ಯಂಗ್ಯ: ಬರ ಪರಿಹಾರ ನೆರವಿಗೆ ಸರ್ವಪಕ್ಷ ನಿಯೋಗ ಹೋಗಿದ್ದೆವು. ಆದ್ರೆ ನಾನು ಬಿಟ್ರೆ ಯಾರೂ ಮಾತೇ ಆಡಿಲ್ಲ. ನಿಮ್ಮವರೇ ಇದ್ದಾರೆ, ಮಾತಾಡಿ ಅಂದ್ರೂ ಯಾರೂ ಬಾಯ್ಬಿಟ್ಟಿಲ್ಲ. ಇಲ್ಲಿ ಮಾತ್ರ ಸರ್ವಪಕ್ಷ ನಿಯೋಗ ಅಂತಾರೆ ಅಂತಾ ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ರು.
ಸಿಎಂ ಗೆ ರೈತ ಧನ್ಯವಾದ: ಕೊಡಗಿನ ರೈತ ದೇವಯ್ಯ ಜೊತೆ ದೂರವಾಣಿಯಲ್ಲಿ ಮಾತನಾಡಿದ ಸಿಎಂ, ಬರಪರಿಹಾರ ಹಣ ನಿಮ್ಮ ಖಾತೆಗೆ ಬಂದಿದ್ಯಾ..? ಇಲ್ವಾ..?. 5,440 ರೂ ಪರಿಹಾರ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಿದ್ಯಾ? ಎಂದು ಸಿಎಂ ಪರಿಶೀಲಿಸಿದ್ರು. ಈ ವೇಳೆ ರೈತ ದೇವಯ್ಯ `ನನ್ನ ಖಾತೆಗೆ ಹಣ ಬಂದಿದೆ, ತುಂಬಾ ಸಹಾಯವಾಗಿದೆ, ನಿಮಗೆ ಧನ್ಯವಾದ’ ಅಂತಾ ಹೇಳಿದ್ರು.
ಇದೇ ವೇಳೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ.ಪಾಟೀಲ್, ಕೃಷಿ ಸಚಿವ ಕೃಷ್ಣಭೈರೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಬೆಳೆ ನಷ್ಟ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲು ದೇಶದಲ್ಲೇ ಮೊದಲ ಬಾರಿಗೆ "ಸಂರಕ್ಷಣೆ ತಂತ್ರಾಶ" ಕ್ಕೆ ಇಂದು ಚಾಲನೆ ನೀಡಲಾಯಿತು. pic.twitter.com/ytLscdLooR
— CM of Karnataka (@CMofKarnataka) March 14, 2017