ಬೆಂಗಳೂರು: ಬಿಜಿಎಸ್ ಶಿಕ್ಷಣ ಸಂಸ್ಥೆಯನ್ನು ಡೀಮ್ಡ್ ಶಿಕ್ಷಣ ಸಂಸ್ಥೆಯನ್ನಾಗಿ ಘೋಷಣೆ ಮಾಡುವುದಕ್ಕೆ ಅವಶ್ಯವಿರುವ ಸಹಕಾರವನ್ನು ರಾಜ್ಯ ಸರಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಬಿಜಿಎಸ್ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಸಮೂಹದ 11ನೇ ಸಂಸ್ಥಾಪಕರ ದಿನಾಚರಣೆ ಹಾಗೂ ಬಿಜಿಎಸ್ ಉತ್ಸವ-2018ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Advertisement
ಬಿಜಿಎಸ್ ಶಿಕ್ಷಣ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಹಾಗೂ ವಿಶ್ವವಿದ್ಯಾಯವನ್ನಾಗಿ ಘೋಷಣೆ ಮಾಡಲು ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ. ರಾಜ್ಯ ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಖಾಸಗಿ ಶಾಲೆಗಳಂತೆ ಸರಕಾರಿ ಶಾಲೆಗಳಲ್ಲೂ ಉತ್ತಮ ಗುಣಮಟ್ಟವ ಶಿಕ್ಷಣ ನೀಡಲಾಗುತ್ತಿದೆ. ಉತ್ತಮ ಗುಣಮಟ್ಟ ಶಿಕ್ಷಣ ನೀಡಿದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ. ಆದ್ದರಿಂದ ಪೋಷಕರಿಗೆ ಏನೇ ಕಷ್ಟಗಳಿದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ನಾಡಿಗೆ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಂತೆ ಕರೆ ನೀಡಿದರು.
Advertisement
Advertisement
ಕೇಂದ್ರ ಸಾಂಖ್ಯಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ, ಬಿಜಿಎಸ್ ಶಿಕ್ಷಣ ಸಂಸ್ಥೆಯನ್ನು ಡೀಮ್ಡ್ ವಿಶ್ವವಿದ್ಯಾಲಯವನ್ನಾಗಿ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟರೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ ಸಂಸ್ಕಾರಯುತ ಸಮಾಜ ನಿರ್ಮಾಣಕ್ಕಾಗಿ ಶಿಕ್ಷಣ ಸಂಸ್ಥೆ ಆರಂಭಿಸುವ ಮೂಲಕ ಸಮಾಜ ಪರಿವರ್ತನೆಗೆ ಮುಂದಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಕೊಡುಗೆ ಅಪಾರವಾದದ್ದು. ಪರಿಸರ ಸಂರಕ್ಷಣೆ, ಶಿಕ್ಷಣ, ಆರೋಗ್ಯ, ಧಾರ್ಮಿಕ ಜಾಗೃತಿ ಮೂಡಿಸುವ ಮೂಲಕ ಸ್ವಾಮೀಜಿ ಅವರು ಹಾಕಿಕೊಟ್ಟ ಮಾರ್ಗದರ್ಶವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Advertisement
ನೂತನ ಸಂಸದ ಎಲ್.ಆರ್. ಶಿವರಾಮೇಗೌಡ ಮಾತನಾಡಿ, ಬಿಜಿಎಸ್ ಶಿಕ್ಷಣ ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ತನ್ನದೇ ಆದ ಪಾತ್ರ ವಹಿಸಿದೆ. ಇಲ್ಲಿ ವ್ಯಾಸಂಗ ಪಡೆದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉದ್ಯೋಗ ಗಿಟ್ಟಿಸುವ ಮಟ್ಟಕ್ಕೆ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ ಎಂದು ಶ್ಲಾಘಿಸಿದರು.
ನಟ ಪ್ರಜ್ವಲ್ ದೇವರಾಜ್ ಮಾತನಾಡಿ, ತೆರೆ ಮೇಲೆ ಹೀರೋ ಆಗಲು ಚಲನಚಿತ್ರಗಳೇ ಬೇಕಾಗಿಲ್ಲ. ನಿಜ ಜೀವನದಲ್ಲೂ ಸಮಾಜ ಸೇವೆ ಮಾಡುವ ಮೂಲಕ ಹೀರೋ ಆಗಬಹುದು ಎಂದರು.
ಬಿಜಿಎಸ್ ಉತ್ಸವದಲ್ಲಿ ಯಕ್ಷಗಾನ, ಕೂಚುಪುಡಿ, ಭರತನಾಟ್ಯ, ಹುಲಿವೇಶ ಸೇರಿಂದತೆ ಇನ್ನಿತರ ವೈಭವಯುತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಬಿಜಿಎಸ್ ಶಿಕ್ಷಣ ಸಂಸ್ಥೆ ಕೊಡಮಾಡುವ ಸೇವಾ ರತ್ನ ಪ್ರಶಸ್ತಿಯನ್ನು ಎಸ್‍ಜೆಬಿಯ ಪ್ರಾಂಶುಪಾಲ ಪುಟ್ಟರಾಜು ಹಾಗೂ ಕೆ.ಎಸ್. ಕುಮಾರಸ್ವಾಮಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಸ್‍ಜೆಬಿ, ಬಿಜಿಎಸ್ ಗ್ರೂಫ್ ಆಫ್ ಇನ್‍ಸ್ಟಿಟ್ಯೂಷನ್ ಹಾಸ್ಪಿಟಲ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶನಾಥ ಸ್ವಾಮೀಜಿ, ಚಿತ್ರ ನಟ ಪ್ರಜ್ವಲ್ ದೇವರಾಜ್, ಎಂಸಿಐ ಬೋರ್ಡ್ ಆಫ್ ಗವರ್ನರ್ ನಿರ್ದೇಶಕ ಮತ್ತು ಸದಸ್ಯ ಡಾ. ಬಿ.ಎನ್. ಗಂಗಾಧರ್, ಗ್ಲೋಬಲ್ ಆಸ್ಪತ್ರೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ನಿರ್ದೇಶಕ ಡಾ. ರವೀಂದ್ರನಾಥ್ ಕೆ., ಚಿತ್ರ ನಿರ್ಮಾಪಕ ಮಂಜು ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv