ಮೋದಿ ಅಧಿಕಾರಿಗಳಿಗೆ ಸಿದ್ದು ಅಧಿಕಾರಿಗಳ ಶಾಕ್ – ಐಟಿ ದಾಳಿ ತಡೆಯಲು ಎಸಿಬಿ ಪ್ರತ್ಯಾಸ್ತ್ರ ಬಳಕೆ?

Public TV
1 Min Read
ACB and income tax it

ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳನ್ನು ಹೆಡೆಮುರಿ ಕಟ್ಟಲು ಸಿದ್ದು ಸರ್ಕಾರ ಪ್ಲಾನ್ ರೂಪಿಸಿದ್ಯಾ ಎನ್ನುವ ಪ್ರಶ್ನೆಯೊಂದು ಈಗ ಎದ್ದಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಎಸಿಬಿ ಈ ನಡೆಯ ಬಗ್ಗೆ ಅನುಮಾನ ಬಂದು ಐಟಿ ಡಿಜಿ ಬಾಲಕೃಷ್ಣನ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ. ದತ್ತಾ ಅವರಿಗೆ ಕಳವಳ ವ್ಯಕ್ತಪಡಿಸಿ ಪತ್ರ ಬರೆದ ವಿಚಾರ ಬಹಿರಂಗವಾದ ಕಾರಣ ಈಗ ಈ ಪ್ರಶ್ನೆ ಎದ್ದಿದೆ.

ರಾಜ್ಯ ಸರ್ಕಾರದ ಸಚಿವರ ಮನೆ ಮೇಲೆ ಐಟಿ ದಾಳಿ ಮುನ್ಸೂಚನೆ ಸಿಕ್ಕಿದ ಹಿನ್ನೆಲೆಯಲ್ಲಿ ಮೂವರು ಐಟಿ ಅಧಿಕಾರಿಗಳ ಮೇಲೆ ದಾಳಿ ಎಸಿಬಿ ನಡೆಸಲು ಸಿದ್ಧತೆ ನಡೆದಿದೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ. ಎರಡು ತನಿಖಾ ಸಂಸ್ಥೆಗಳ ನಡುವೆ ತಿಕ್ಕಾಟ ಆದಲ್ಲಿ ಸಮಾಜದಲ್ಲಿ ಕೆಟ್ಟ ಅಭಿಪ್ರಾಯ ಬರುತ್ತದೆ. ಈ ಹಿನ್ನೆಲೆಯಲ್ಲಿ ಕಳವಳ ವ್ಯಕ್ತಪಡಿಸಿ ಬಾಲಕೃಷ್ಣನ್ ಪತ್ರ ಬರೆದಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.

ಎಸಿಬಿ ಡಿಜಿ ಎಂಎಎನ್ ರೆಡ್ಡಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಭ್ರಷ್ಟಚಾರ ನಿಯಂತ್ರಣ ಕಾಯ್ದೆ ಅಡಿ ಐಟಿ ಅಧಿಕಾರಿಗಳ ಮನೆ ಮೇಲೆ ದಾಳಿ ಸಿದ್ಧತೆ ನಡೆಸಿದ್ದ ಬೆನ್ನಲ್ಲೇ ಬಾಲಕೃಷ್ಣನ್ ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಯಾರ ಮನೆ ಮೇಲೆ ದಾಳಿ ನಡೆದರೂ ಐಟಿ ಅಧಿಕಾರಿಗಳು ಹಣ ಕೇಳಿದರು ಎಂದು ದೂರು ದಾಖಲು ಮಾಡಿಕೊಳ್ಳಬೇಕು ಎಂದು ಎಸಿಬಿಗೆ ನಿರ್ದೇಶನ ಹೋಗಿತ್ತು ಎಂದು ಹೇಳಲಾಗುತ್ತಿದೆ.

ದ್ವೇಷದ ರಾಜಕೀಯ ಮಾಡಲ್ಲ: ಈ ಪತ್ರದ ಬಗ್ಗೆ ಪಬ್ಲಿಕ್ ಟಿವಿಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿ, 20 ದಿನದ ಹಿಂದೆ ಬಾಲಕೃಷ್ಣನ್ ಅವರು ಪತ್ರ ಬರೆದಿರುವುದು ನನ್ನ ಗಮನಕ್ಕೆ ಬಂದಿದೆ. ಐಟಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸುವ ಬಗ್ಗೆ ಎಸಿಬಿಯಲ್ಲಿ ಯಾವುದೇ ಸಭೆ ನಡೆದಿಲ್ಲ. ಅವರು ದಾಳಿ ನಡೆಯಬಹುದು ಎಂದು ಊಹಿಸಿ ಪತ್ರ ಬರೆದಿದ್ದಾರೆ. ಎಸಿಬಿಗೆ ತನ್ನದೇ ಆದ ಕಾರ್ಯವ್ಯಾಪ್ತಿ ಇದೆ. ಈ ಕಾರ್ಯವ್ಯಾಪ್ತಿಯನ್ನು ಬಿಟ್ಟು ಹೋಗುವುದಿಲ್ಲ. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡಿದಂತೆ ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು.

 

Share This Article
Leave a Comment

Leave a Reply

Your email address will not be published. Required fields are marked *