ಹುಬ್ಬಳ್ಳಿ: ರಾಜ್ಯ ಸರ್ಕಾರ ಸದ್ಯ ಐಸಿಯುನಲ್ಲಿದ್ದು, ಕೋಮಾ ಸ್ಥಿತಿ ತಲುಪಿದೆ. ರಾಜ್ಯದಲ್ಲಿ 22 ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸುಭದ್ರ ಸರ್ಕಾರ ಬೇಕೋ, ಭ್ರಷ್ಟಾಚಾರದ ಸರ್ಕಾರ ಬೇಕೋ ಜನರೇ ತೀರ್ಮಾನ ಮಾಡಲಿ. ಪುಲ್ವಾಮಾ ದಾಳಿ ಬಗ್ಗೆ ನನಗೆ ಮೊದಲೇ ಗೊತ್ತಿತ್ತು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಇದು ಕುಮಾರಸ್ವಾಮಿ ಅವರ ನೈತಿಕ ಅಧಃ ಪತನ. ಸರ್ಕಾರದ ಆಯಸ್ಸು ಮುಗಿಯುತ್ತಾ ಬಂದಿದೆ. ರಾಜ್ಯ ಸರ್ಕಾರ ಸದ್ಯ ಐಸಿಯುನಲ್ಲಿದ್ದು ಕೋಮಾ ಸ್ಥಿತಿಯನ್ನು ತಲುಪಿದೆ ಅಂದ್ರು.
ಕುಟುಂಬ ರಾಜಕಾರಣ ಅಂದ್ರೆ ಕುಟುಂಬದಲ್ಲಿ ಒಬ್ಬರು ಇಬ್ಬರೂ ರಾಜಕೀಯ ಮಾಡುವುದಲ್ಲ. ಸಂಪೂರ್ಣ ಕುಟುಂಬವೇ ರಾಜಕಾರಣ ಮಾಡುವುದು. ಅದಕ್ಕೆ ಉತ್ತಮ ಉದಾಹರಣೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ. ನಾನು ನಿಂಬೆ ಹಣ್ಣು ಇಟ್ಟುಕೊಂಡು ಭವಿಷ್ಯ ಹೇಳುತ್ತಿಲ್ಲ. ಪಕ್ಷದ ಬಲ ನೋಡಿ 22 ಸೀಟು ಗೆಲ್ಲುವುದಾಗಿ ಹೇಳುವೆ ಎಂದು ತಿಳಿಸಿದ್ರು.
ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗೆ ಕಂಕಣ ಬದ್ಧರಾಗಿದ್ದಾರೆ. ಮೋದಿ ಅವರ ಅನೇಕ ಜನಪರ ಯೋಜನೆಗಳನ್ನು ಕೊಟ್ಟಿದ್ದಾರೆ. ಸಿಎಂ ಕುಮಾರಸ್ವಾಮಿಗೆ ಮಂಡ್ಯ ಲೋಕಸಭೆಯ ಸೋಲಿನ ಭಯ ಕಾಡುತ್ತಿದೆ. ಕುಟುಂಬ ರಾಜಕಾರಣದಿಂದ ರಾಜ್ಯದ ಜನ ಬೇಸತ್ತಿದ್ದಾರೆ ಅಂದ್ರು.
ಐಟಿ ದಾಳಿ ಕುರಿತು ಮಾತನಾಡಿದ ಅವರು, ದಾಖಲೆಗಳನ್ನ ಪರಿಶೀಲಿಸಿ ದಾಳಿ ನಡೆಯುತ್ತದೆ. ಬಿಜೆಪಿಯ ಅನೇಕ ನಾಯಕರ ಮನೆ ಮೇಲೂ ದಾಳಿ ಆಗಿದೆ. ಆಗ ನಾವು ಬೀದಿಗಿಳಿದು ಹೋರಾಟ ಮಾಡಿಲ್ಲ. ಮುಖ್ಯಮಂತ್ರಿ ಮಾತಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಹೇಳಿದ್ರು.
ಕುಂದಗೋಳ ಬೈ ಎಲೆಕ್ಷನ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ನಾಯಕರೊಂದಿಗೆ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಧರ್ಮ ಒಡೆದವರು ಸದ್ಯ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು.