ಕಲಬುರಗಿ: ಇತ್ತ ಬಚಾವತ್ ಆಯೋಗದ ಆದೇಶದಂತೆ ಭೀಮಾ ನದಿಗೆ ಮಹಾರಾಷ್ಟ್ರದಿಂದ ನೀರು ತರಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದಲ್ಲಿ ಭೀಕರ ಬರ ತಾಂಡವವಾಡ್ತಿದೆ. ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದ ಜನ ನೀರಿಗಾಗಿ ಪರದಾಡ್ತಿದ್ದಾರೆ. ಹನಿ ನೀರಿಗಾಗಿ ಅಲೆದಾಡುತ್ತಿರೋ ಜಾನುವಾರುಗಳು, ಕೊಡ ಹಿಡಿದು ನೀರಿಗಾಗಿ ಜನರ ಪರದಾಡುತ್ತಿದದ್ದಾರೆ. ಜೇವರ್ಗಿ ತಾಲೂಕಿನ ಭೀಮಾ ನದಿ ನೀರಿನ ಪಸೆ ಕಾಣದೇ ಬರಡು ಭೂಮಿಯಂತಾಗಿದೆ. ಹನಿ ನೀರು ಬೇಕು ಅಂದರೆ ಜನರು ನದಿಯಲ್ಲಿ ಮರಳು ತೆಗಿತಾರೆ. ಆಗ ಬೊಗಸೆಯಷ್ಟು ಸಿಗುವ ನೀರನ್ನು ಮನೆಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ.
Advertisement
Advertisement
ಇನ್ನು ಮೂಕ ಪ್ರಾಣಿಗಳ ವೇದನೆಯಂತೂ ಕೇಳೋದೆ ಬೇಡ. ಬತ್ತಿದ ನದಿಯಲ್ಲೇ ಜಾನುವಾರುಗಳು ಕಿ.ಮೀಗಟ್ಟಲೆ ಸಂಚರಿಸಿ ಅಲ್ಲಿ ಇಲ್ಲಿ ಸಿಕ್ಕ ಅಲ್ಪ ಸ್ವಲ್ಪ ನೀರು ಕುಡಿದು ದಾಹ ತೀರಿಸಿಕೊಳ್ಳುತ್ತಿವೆ.
Advertisement
Advertisement
ಬಚಾವತ್ ಆಯೋಗದ ಪ್ರಕಾರ, ಉಜನಿ ಡ್ಯಾಂನಿಂದ ಪ್ರತಿ ವರ್ಷ 15 ಟಿಎಂಸಿ ನೀರು ಬಿಡಬೇಕು ಎಂಬ ಆದೇಶವಿದೆ. ಆದ್ರೆ ಮಹಾರಾಷ್ಟ್ರ ಸರ್ಕಾರ ಮಾತ್ರ ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ನೀರೂ ಬಿಡುತ್ತಿಲ್ಲ. ದುರಂತ ಅಂದರೆ ನಮ್ಮ ರಾಜಕಾರಣಿಗಳಿಗೆ ಭೀಮಾ ನದಿ ನೀರಿನ ಹಂಚಿಕೆ ಬಗ್ಗೆ ಮಾಹಿತಿಯೇ ಇಲ್ಲ. ಹೀಗಾಗಿ ಕಲಬುರಗಿ-ವಿಜಯಪುರ ಜಿಲ್ಲೆಯ ಜನ ನೀರಿಗಾಗಿ ಪರದಾಡುತ್ತಿದ್ದಾರೆ.
ಇನ್ನು ತಡವಾಗಿಯಾದರೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚೆತ್ತುಗೊಂಡಿದ್ದು, ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಮಹಾರಾಷ್ಟ್ರ ಸಿಎಂ ಬಳಿ ನೀರಿಗಾಗಿ ಮನವಿ ಮಾಡಿದ್ದಾರೆ. ಆದರೆ ಮನವಿಗೆ ಕ್ಯಾರೆ ಅಂದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ ನೀರು ಬಿಡಲು ಮನವಿ ಸಲ್ಲಿಸಲಾಗಿದೆ ಅಂತ ಹೇಳುತ್ತಿದ್ದಾರೆ.
ಆಪರೇಷನ್ ಕಮಲದ ವೇಳೆ ಮಹಾರಾಷ್ಟ್ರ ಸಿಎಂ ಜೊತೆ ನಿಕಟ ಸಂಪರ್ಕವಿರುವ ಡಾ.ಉಮೇಶ್ ಜಾಧವ್ ಕಲಬುರಗಿ ಜನರ ನೀರಿನ ದಾಹ ನೀಗಿಸ್ತಾರಾ? ಅಥವಾ ಬರೀ ಅವರ ರಾಜಕೀಯ ಮಾಡಿಕೊಂಡು ಸುಮ್ಮನಿರುತ್ತಾರಾ ಎಂದು ಕಾದು ನೋಡಬೇಕು.