ಬೆಂಗಳೂರು: ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ (Shankar Patil Munenakoppa) ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯ (Belagavi) ಸುವರ್ಣಸೌಧದಲ್ಲಿ ಇಂದು ರಾಜ್ಯದಲ್ಲಿ ಎಥನಾಲ್ ಉತ್ಪಾದನಾ ನಿಯಮಗಳನ್ನು ರೂಪಿಸುವುದಕ್ಕಾಗಿ ರಚಿತವಾಗಿರುವ ಸಮಿತಿಯ ಸಭೆಯನ್ನು ಆಯೋಜಿಸಲಾಯಿತು.
ಕೇಂದ್ರ ಸರ್ಕಾರದ (Central Government) ಮಹತ್ವಾಕಾಂಕ್ಷಿ ಯೋಜನೆಯಾದ ಪೆಟ್ರೋಲ್‍ನೊಂದಿಗೆ ಎಥನಾಲ್ ಮಿಶ್ರಣ ಯೋಜನೆಯಡಿಯಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಹಾಗೂ ಡಿಸ್ಟಿಲರಿ ಹೊಂದಿರುವ ಘಟಕಗಳಿಗೆ ಎಥನಾಲ್ ಉತ್ಪಾದಿಸಲು ರಾಜ್ಯ ಸರ್ಕಾರದಿಂದ ವಿಶೇಷ ನೀತಿಯನ್ನು ಜಾರಿಗೊಳಿಸಿ ಆ ಮೂಲಕ ಆರ್ಥಿಕ ಉತ್ತೇಜನ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
Advertisement
Advertisement
ರಾಜ್ಯದಲ್ಲಿ ಪ್ರಸ್ತುತ 73 ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ 34 ಸಕ್ಕರೆ ಕಾರ್ಖಾನೆಗಳಲ್ಲಿ ಡಿಸ್ಟಿಲರಿ/ಎಥನಾಲ್ ಉತ್ಪಾದನಾ ಘಟಕಗಳಿದ್ದು, ಇವುಗಳು ಪ್ರತಿದಿನ 4,650 ಕೆ.ಎಲ್.ಪಿ.ಡಿ. ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ಸಚಿವರಾದ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ತಿಳಿಸಿದರು.
Advertisement
Advertisement
ಸಕ್ಕರೆ ಕಾರ್ಖಾನೆಗಳಿಗೆ ಎಥನಾಲ್ ಉತ್ಪಾದಿಸಲು ಆರ್ಥಿಕ ಉತ್ತೇಜನ ನೀಡುವ ಸಂಬಂಧ ದೇಶದ ವಿವಿಧ ರಾಜ್ಯಗಳಲ್ಲಿರುವ ನೀತಿ/ಯೋಜನೆಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ಸಭೆಯನ್ನು ಸದ್ಯದಲ್ಲಿಯೇ ಕರೆಯಲಿದ್ದು, ಸದರಿ ಸಭೆಯಲ್ಲಿ ರಾಜ್ಯ ಸರ್ಕಾರದಿಂದ ಸಕ್ಕರೆ ಕಾರ್ಖಾನೆಗಳಿಗೆ ನೀಡಬಹುದಾದ ಆರ್ಥಿಕ ಸಹಾಯ/ಪ್ರೋತ್ಸಾಹದಾಯಕ ಕ್ರಮಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಚೀನಾದಲ್ಲಿ ಕೋವಿಡ್ ಹಾವಳಿ – ಮೊದಲ ಬಾರಿಗೆ ಕೊರೊನಾ ಬಗ್ಗೆ ಜಿನ್‌ಪಿಂಗ್ ಮಾತು
ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಪರಿಷತ್ತಿನ ಸದಸ್ಯರಾದ ಲಕ್ಷ್ಮಣ ಸವದಿ, ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಇದನ್ನೂ ಓದಿ: ಮಾರುವೇಷದಲ್ಲಿ ಬೆಳಗಾವಿಗೆ ನುಗ್ಗಲು ಶಿವಸೇನೆ ಯತ್ನ