ಉಡುಪಿ: ಉಡುಪಿಯ ಸುವರ್ಣ ತ್ರಿಭುಜ ಬೋಟ್‍ನಲ್ಲಿ ಮೀನುಗಾರಿಕೆಗೆ ತೆರಳಿ ಕಣ್ಮರೆಯಾಗಿರುವ ಏಳು ಜನ ಮೀನುಗಾರರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಲು ರಾಜ್ಯ ಸಮ್ಮಿಶ್ರ ಸರ್ಕಾರ ತೀರ್ಮಾನಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಉಡುಪಿಯಿಂದ ಸುವರ್ಣ ತ್ರಿಭುಜ ಬೋಟ್‍ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಏಳು ಮೀನುಗಾರರು ಕಣ್ಮರೆಯಾಗಿದ್ದಾರೆ. ಮೀನುಗಾರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಧನ ನೀಡುವ ಆದೇಶವಾಗಿದೆ. ಮೀನುಗಾರ ಸಂಕಷ್ಟ ಪರಿಹಾರ ನಿಧಿ, ಸಿಎಂ ಪರಿಹಾರ ನಿಧಿಯಿಂದ ಹಣ ನೀಡಲಾಗುವುದು. ಸಮುದ್ರದಲ್ಲಿ ಕಣ್ಮರೆಯಾದವರು ಶೀಘ್ರ ಪತ್ತೆಯಾಗಲಿ ಎಂಬುದು ನಮ್ಮ ಆಶಯ ಎಂದು ಹೇಳಿದರು.
Advertisement
Advertisement
ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ದೊಡ್ಡ ಮೊತ್ತದ ಪರಿಹಾರಕ್ಕಾಗಿ ಕೇಂದ್ರವನ್ನು ಒತ್ತಾಯಿಸುತ್ತೇವೆ ಎಂದು ಭರವಸೆ ನೀಡಿದರು.
Advertisement
ಉಡುಪಿ ಭಾಗಶಃ ಬರಪೀಡಿತ ಜಿಲ್ಲೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. 126 ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯಿದೆ. ಎಲ್ಲಾ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇವೆ. ಬಜೆ ಡ್ಯಾಂ ನೀರು ಸಂಪೂರ್ಣ ಇಂಗಿ ಹೋಗಿದೆ. ಡ್ಯಾಂನ ಹೂಳೆತ್ತುವ, ಬಂಡೆ ಒಡೆಯುವ ಪ್ರಕ್ರಿಯೆ ಮಾಡುತ್ತೇವೆ ಎಂದು ಹೇಳಿದರು.
Advertisement
ಬರ ನಿರ್ವಹಣೆಯ ಹಣಕಾಸಿಗೆ ತೊಂದರೆ ಇಲ್ಲ. 33 ಕೋಟಿ ರೂ. ಖಾತೆಯಲ್ಲಿದೆ. ಸಮುದ್ರಕ್ಕೆ ಹರಿಯುವ ನೀರನ್ನು ರಿಚಾರ್ಜ್ ಮಾಡಬೇಕಾಗಿದೆ. ಮಳೆನೀರು ಕೊಯ್ಲು ಯೋಜನೆ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಮಾಡಿ ಚರ್ಚೆ ಮಾಡಲಾಗುತ್ತದೆ. ಜಿಲ್ಲೆಯ 400 ಮದಗಗಳ ಹೂಳೆತ್ತುತ್ತೇವೆ. ನಗರ ಪ್ರದೇಶದ ಜನರಿಗೆ ಕುಡಿಯುವ ತೊಂದರೆ ಆಗುವುದಿಲ್ಲ. ನದಿಗೆ ಹಾಕಿರುವ ಎಲ್ಲಾ ಪಂಪ್ ಸೆಟ್ ಕಡಿತ ಮಾಡುತ್ತೇವೆ ಎಂದರು.