ಬೆಳಗಾವಿ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ಅದಿರು ಉದ್ಯಮಿ ಆರ್.ಎನ್.ನಾಯಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಮೊದಲ ಕೋಕಾ ಕೇಸ್‍ನ ತೀರ್ಪು ಇಂದು ಪ್ರಕಟವಾಗಲಿದೆ.
ಬೆಳಗಾವಿಯ ಕೋಕಾ ನ್ಯಾಯಾಲಯದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ತೀರ್ಪು ಪ್ರಕಟವಾಗಲಿದ್ದು, ರಾಜ್ಯದ ಮೊದಲ ಕೋಕಾ ಪ್ರಕರಣ ಇದಾಗಿದೆ. ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 13 ಪಾತಕಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಘಟನೆ ನಡೆದು ಬರೋಬ್ಬರಿ 9 ವರ್ಷಗಳ ಬಳಿಕ ತೀರ್ಪು ಪ್ರಕಟವಾಗುತ್ತಿದೆ. ಇದನ್ನೂ ಓದಿ: ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ
ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಕೆ.ಜಿ.ಪುರಾಣಿಕಮಠ ಅವರು ವಕಾಲತ್ತು ವಹಿಸಿದ್ದರು. ಈ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರತಾಪ್ ರೆಡ್ಡಿ, ಅಲೋಕ್ ಕುಮಾರ್, ಮಾಜಿ ಪೊಲೀಸ್ ಅಧಿಕಾರಿಗಳಾದ ಭಾಸ್ಕರ್ ರಾವ್, ಅಣ್ಣಾ ಮಲೈ ಸೇರಿ ಒಟ್ಟು 210 ಜನರು ಸಾಕ್ಷಿ ನುಡಿದಿದ್ದಾರೆ. 1,027 ದಾಖಲೆ ಪತ್ರಗಳು ಹಾಗೂ 138 ಮುದ್ದೆಮಾಲನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
3 ಕೋಟಿ ರೂ. ಹಫ್ತಾ ಕೇಳಿದ್ದ ರಾಜಾ
ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಆರ್.ಎನ್.ನಾಯಕ್ ಅದಿರು ಉದ್ಯಮಿಯೂ ಆಗಿದ್ದರು. ಈ ಕಾರಣಕ್ಕೆ ಬನ್ನಂಜೆ ರಾಜಾ, ಆರ್.ಎನ್.ನಾಯಕ್ ಅವರನ್ನು ಟಾರ್ಗೆಟ್ ಮಾಡಿದ್ದ. ವಿದೇಶದಲ್ಲಿ ಕುಳಿತುಕೊಂಡೇ ಬನ್ನಂಜೆ ರಾಜಾ ನಾಯಕರ ಬಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. 3 ಕೋಟಿ ರೂ. ಹಫ್ತಾ ನೀಡದಿದ್ರೆ ಪ್ರಾಣ ತೆಗೆಯುವ ಬೆದರಿಕೆಯನ್ನು ನಾಯಕ್ ಅವರಿಗೆ ಹಾಕಲಾಗಿತ್ತು. ಈ ಸಂಬಂಧ ನಾಯಕ್ ಅಂಕೋಲಾ ಠಾಣೆಯಲ್ಲಿ ದೂರು ನೀಡಿದ್ದರು.