ಬೆಂಗಳೂರು: ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿ ಹೈಕಮಾಂಡ್ ಶನಿವಾರ ರಾತ್ರೋರಾತ್ರಿ ಬಿಗ್‍ಶಾಕ್ ಕೊಟ್ಟಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪನವರ ಎರಡು ಬಣಗಳಿಗೂ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಬಿಸಿ ಮುಟ್ಟಿಸಿದ್ದಾರೆ.
ಈಶ್ವರಪ್ಪ ಟೀಂನಿಂದ ಭಾನುಪ್ರಕಾಶ್, ನಿರ್ಮಲ್ ಕುಮಾರ ಸುರಾನಾ ಅವರು ಹೊಂದಿದ್ದ ಉಪಾಧ್ಯಕ್ಷ ಸ್ಥಾನವನ್ನ ಕಿತ್ಕೊಂಡು ಇಬ್ಬರಿಗೂ ಕೊಕ್ ಕೊಟ್ಟಿದೆ. ಇತ್ತ ಬಿ.ಎಸ್ ಯಡಿಯೂರಪ್ಪ ಬಣದ ಎಂ.ಪಿ. ರೇಣುಕಾಚಾರ್ಯಗೆ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನದಿಂದ ಕೊಕ್ ಕೊಟ್ರೆ, ಗೋ ಮಧುಸೂಧನ್ ಅವರಿಗೆ ನೀಡಲಾಗಿದ್ದ ರಾಜ್ಯ ವಕ್ತಾರ ಹುದ್ದೆಯನ್ನ ಹೈಕಮಾಂಡ್ ಕಸಿದುಕೊಂಡು ಇಬ್ಬರು ನಾಯಕರಿಗೆ ಖಡಕ್ ಎಚ್ಚರಿಕೆ ಕೊಟ್ಟಿದೆ.
ನಿನ್ನೆ ರಾತ್ರಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತುಕತೆ ನಡೆದಿತ್ತು. ಕೊನೆಗೆ ಯಡಿಯೂರಪ್ಪ-ಈಶ್ವರಪ್ಪ ಕಿತ್ತಾಟ ಕಂಡು ಮುರಳೀಧರ್ ರಾವ್ ಖಡಕ್ ತೀರ್ಮಾನ ಕೈಗೊಂಡು ನಿಮಗಿಂತಾ ಬಿಜೆಪಿ ಹೈಕಮಾಂಡ್ ಸ್ಟ್ರಾಂಗ್ ಇದೆ. ಕೈಕಟ್ಟಿ ಕೂತಿಲ್ಲ ಅನ್ನೋ ಎಚ್ಚರಿಕೆ ಕೊಟ್ಟಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಭೇಟಿ ಬಳಿಕ ಅಲ್ಲಿಂದ ತೆರಳಿದ ಬಿ.ಎಸ್ ಯಡಿಯೂರಪ್ಪ ಸೀದಾ ಶಿವಮೊಗ್ಗಕ್ಕೆ ಹೋದ್ರು. ಇಂದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು, ಯಡಿಯೂರಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಅಂದಹಾಗೆ ಕಾಂಗ್ರೆಸ್‍ನಲ್ಲೂ ನಿನ್ನೆ ಮಹಾ ಬದಲಾವಣೆಯೇ ಆಗಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿದ್ದ ದಿಗ್ವಿಜಯ್ ಸಿಂಗ್‍ಗೆ ಕೊಕ್ ಕೊಟ್ಟು ಆ ಜಾಗಕ್ಕೆ ವೇಣುಗೋಪಾಲ್ ಅವ್ರನ್ನ ನೇಮಿಸಿದೆ.