CinemaKarnatakaLatestMain PostSandalwood

ಚಿತ್ರಮಂದಿರಗಳಲ್ಲಿ ನಾಡಗೀತೆಯೂ ಮೊಳಗಲಿ: ಸಿಎಂ ಗೆ ಮನವಿ ಸಲ್ಲಿಸಿದ ನಟ ಝೈದ್ ಖಾನ್

ರಾಜ್ಯದ ಚಿತ್ರಮಂದಿರಗಳಲ್ಲಿ (Theatre) ಇನ್ನುಮುಂದೆ ರಾಷ್ಟ್ರಗೀತೆಯ ಜೊತೆಗೆ ನಾಡಗೀತೆಯನ್ನೂ ಹಾಕುವಂತೆ ಚಾಮರಾಜಪೇಟೆ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ ಬಿ ಝೆಡ್ ಜಮೀರ್ ಅಹ್ಮದ್ ಖಾನ್ ಅವರ ಪುತ್ರ, ಸ್ಯಾಂಡಲ್ ವುಡ್ ನಟ ಶ್ರೀ ಝೈದ್ ಖಾನ್ (Zaid Khan) ಅವರು ಇಂದು ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ (Basavaraja Bommai) ಅವರಿಗೆ ಮನವಿ ಸಲ್ಲಿಸಿದರು.

ನಮ್ಮ ದೇಶ, ನಾಡು, ನುಡಿಯ ಸಂಕೇತವಾಗಿರುವ ರಾಷ್ಟ್ರ ಗೀತೆ ಹಾಗೂ ನಾಡಗೀತೆಗಳು ಹಿರಿಯರಿಂದ ಕಿರಿಯವರೆಗೂ ಎಲ್ಲರ ಬಾಯಲ್ಲೂ ಮೊಳಗಬೇಕು. ನಾಡಗೀತೆಯ ಮಹತ್ವ ಇಂದಿನ ಮತ್ತು ಮುಂದಿನ ಪೀಳಿಗೆಯ ಹೃದಯದೊಳಗೆ ಇಳಿಯಬೇಕು. ಹಾಗಾಗಿ ಮುಖ್ಯಮಂತ್ರಿಗಳು ರಾಜ್ಯದ ಚಿತ್ರಮಂದಿರಗಳಲ್ಲಿ ಇನ್ನುಮುಂದೆ ರಾಷ್ಟ್ರಗೀತೆಯ ಜೊತೆಗೆ ನಾಡಗೀತೆಯೂ (state anthem) ಮೊಳಗುವಂತೆ ಮಾಡಬೇಕು ಎಂಬುದಾಗಿ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ಚಲನಚಿತ್ರ ಮಂಡಳಿಯವರೊಂದಿಗೆ ಚರ್ಚಿಸಿ ಈ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ನಟ ಝೈದ್ ಖಾನ್ ಹೇಳಿದರು.

ಇದೇ ವೇಳೆ ತಮ್ಮ ಪ್ಯಾನ್ ಇಂಡಿಯಾ ಚಿತ್ರವಾದ ಬನಾರಸ್ ನ್ನು ಬೈಕಾಟ್ ಮಾಡುವ ಕೂಗು ಕೇಳಿ ಬರುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಒಬ್ಬ ಕಲಾವಿದ. ಪ್ರಾಮಾಣಿಕವಾಗಿ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದೇನೆ. ಇದರಲ್ಲಿ ನನ್ನದೇನು ತಪ್ಪಿದೆ? ಸೋಲು ಮತ್ತು ಗೆಲುವು ಎರಡನ್ನೂ ಸಮನಾಗಿ ತೆಗೆದುಕೊಳ್ಳುವ ಸ್ವಭಾವ ನನ್ನದು. ನಾನೂ ಈ ನೆಲದ ಕಲಾವಿದ. ಜನ ಚಿತ್ರ ನೋಡಿ ಆಶೀರ್ವದಿಸುತ್ತಾರೆ ಎಂದು ನಂಬಿದ್ದೇನೆ ಎಂದು ಪ್ರತಿಕ್ರಿಯಿಸಿದರು.

ಈ ವೇಳೆ ವಿವಿಧ ಕನ್ನಡಪರ ಸಂಘಟನೆ, ದಲಿತಪರ ಸಂಘಟನೆಗಳ ಮುಖಂಡರು ಹಾಗೂ ಮತ್ತಿತರರು ಝೈದ್ ಖಾನ್ ಅವರೊಂದಿಗಿದ್ದರು.

Live Tv

Leave a Reply

Your email address will not be published. Required fields are marked *

Back to top button