ಪತಿ-ಅತ್ತೆ ಚಿತ್ರಹಿಂಸೆ ನೀಡಿ ಹತ್ಯೆ – ಎರಡು ಮಕ್ಕಳ ತಾಯಿ ಮೃತಪಟ್ಟಾಗ ಇದ್ದಿದ್ದು 20ಕೆಜಿ ಮಾತ್ರ!

Public TV
2 Min Read
Tushara kollam

ತಿರುವನಂತಪುರಂ: ವರದಕ್ಷಿಣೆಗಾಗಿ ಮಹಿಳೆಗೆ ಚಿತ್ರ ಹಿಂಸೆ ನೀಡಿದ್ದ ಪತಿ, ಆತನ ಕುಟುಂಬಸ್ಥರು ಊಟ ನೀಡದೆಯೇ ಸಾವನ್ನಪ್ಪುವಂತೆ ಮಾಡಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.

ಮಾರ್ಚ್ 21 ರಂದು ತುಷಾರಾ (27) ಎಂಬ ಮಹಿಳೆಯನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆ ನೀಡಲು ಮುಂದಾದ ವೈದ್ಯರು ಮಹಿಳೆ ಆಸ್ಪತ್ರೆಗೆ ಕರೆತರುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದರು. ಬಳಿಕ ತುಷಾರಾ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಮೃತ ದೇಹವನ್ನು ತಿರುವನಂತಪುರಂ ಮೆಡಿಕಲ್ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು.

ಊಟ ನೀಡದೇ ಚಿತ್ರಹಿಂಸೆ:
ಈ ಘಟನೆ ನಡೆದ 1 ವಾರದ ಬಳಿಕ ತುಷಾರಾ ಸಾವಿನ ಹಿಂದಿನ ರಹಸ್ಯ ಬಯಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಅನ್ವಯ ತುಷಾರಾ ಸಾವನ್ನಪ್ಪಿದ ವೇಳೆ ಆಕೆಯ ದೇಹದ ತೂಕ ಕೇವಲ 20 ಕೆಜಿ ಮಾತ್ರ ಇತ್ತು. ಅಲ್ಲದೇ ಆಕೆಯ ದೇಹದ ಮೇಲೆ ಹಲವು ಗಾಯದ ಗುರುತುಗಳು ಪತ್ತೆಯಾಗಿತ್ತು. ಪರಿಣಾಮ ತುಷಾರಾ ಅವರಿಗೆ ಹಲವು ದಿನಗಳಿಂದ ಊಟ ನೀಡದೇ ಉಪವಾಸ ಇಡಲಾಗಿತ್ತು ಎಂದು ತಿಳಿಸಿದ್ದಾರೆ.

Chanthulal Geetha

ಘಟನೆಯ ಸಂಬಂಧ ಪೊಲೀಸರು ಶುಕ್ರವಾರ ತುಷಾರಾ ಪತಿ ಚಂತೂ ಲಾಲ್ (30), ಅತ್ತೆ ಗೀತಾ (55) ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆಯ ಇಬ್ಬರು ಮಕ್ಕಳನ್ನು ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿದೆ. ಐಪಿಸಿ ಸೆಕ್ಷನ್ 304 (ಬಿ) ಅಡಿ ಪೊಲೀಸರು ದೂರು ದಾಖಲಿಸಿದ್ದಾರೆ.

ತುಷಾರಾ ಅವರಿಗೆ ವರದಕ್ಷಿಣೆ ಕಿರುಕಳ ನೀಡುತ್ತಿದ್ದ ಪತಿ ಮತ್ತು ಆತನ ಕುಟುಂಬಸ್ಥರು ಆಕೆಯನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕಿ ಕುಡಿಯಲು ಸಕ್ಕರೆ ನೀರು, ಮತ್ತು ಗಂಜಿ ಮಾತ್ರ ನೀಡುತ್ತಿದ್ದರು. ಅಲ್ಲದೇ ಆಕೆಯ ಪೋಷಕರು ಮನೆಗೆ ಬಾರದಂತೆ ನಿರ್ಬಂಧ ವಿಧಿಸಿದ್ದರು. ಪರಿಣಾಮ ಕಳೆದ ಒಂದೂವರೆ ವರ್ಷದಿಂದ ಆಕೆಯನ್ನು ಯಾರು ಭೇಟಿಯೇ ಮಾಡಿರಲಿಲ್ಲ. ಅಲ್ಲದೇ ಫೋನ್ ಕೂಡ ನೀಡುತ್ತಿರಲಿಲ್ಲ ಎಂದು ತುಷಾರಾ ಕುಟುಂಬಸ್ಥರು ತಿಳಿಸಿದ್ದಾರೆ.

6 ವರ್ಷಗಳ ಹಿಂದೆ ತುಷಾರ ಅವರನ್ನು ಮದುವೆ ಮಾಡಿಕೊಡಲಾಗಿತ್ತು. ಆ ಬಳಿಕ 3 ಬಾರಿ ಮಾತ್ರ ಅವರು ತಮ್ಮ ತವರು ಮನೆಗೆ ತೆರಳಿದ್ದರು. ಅಲ್ಲದೇ ತುಷಾರಾ ಗರ್ಭಿಣಿ ಆಗಿದ್ದ ಸಮಯದಲ್ಲೂ ತವರಿಗೆ ಕಳುಹಿಸಿರಲಿಲ್ಲ. ಮದುವೆ ಸಮಯದಲ್ಲಿ ಚಿನ್ನಾಭರಣ ಸಮೇತ 2 ಲಕ್ಷ ರೂ. ವರದಕ್ಷಿಣೆಯನ್ನು ನೀಡಲಾಗಿತ್ತು.

arrest 1

27 ದೂರು: ತುಷಾರಾ ಪತಿಯ ಮನೆ ದೇವಾಲಯದ ಸಮೀಪವೇ ಇತ್ತು. ಪರಿಣಾಮ ಹೆಚ್ಚು ಮಂದಿ ಮನೆಯ ಬಳಿ ಓಡಾಡುತ್ತಿದ್ದರು. ಈ ವೇಳೆ ಅವರಿಗೆ ಮನೆಯಿಂದ ಮಹಿಳೆಯೊಬ್ಬರು ಚೀರಾಟ ನಡೆಸುತ್ತಿದ್ದ ಶಬ್ದ ಕೂಡ ಕೇಳಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ 27 ದೂರು ನೀಡಿದ್ದ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೇ ಮನೆಯಲ್ಲಿ ಕೆಲ ನಿಗೂಢ ಚಟುವಟಿಕೆಗಳನ್ನು ಕೂಡ ಕುಟುಂಬಸ್ಥರು ನಡೆಸುತ್ತಿದ್ದರು ಎಂದು ದೂರಿನಲ್ಲೇ ಸ್ಥಳೀಯರು ಉಲ್ಲೇಖಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *