ಮುಂಬೈ: ಉಗ್ರರನ್ನು ಉತ್ಪಾದಿಸಿ ಭಾರತಕ್ಕೆ ಕಳುಹಿಸುತ್ತಿರುವ ಪಾಕಿಸ್ತಾನ ತಿರುಗೇಟು ನೀಡಲು ಭಾರತ ಈಗ ಜಲಾಸ್ತ್ರವನ್ನು ಪ್ರಯೋಗಿಸಿದ್ದು, ಕೆಲಸ ಈಗಾಗಲೇ ಆರಂಭಗೊಂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಇಂಡಸ್ ಒಪ್ಪಂದವನ್ನು ಉಲ್ಲಂಘಿಸದೇ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ನಿಲ್ಲಿಸುವ ಕಾರ್ಯ ಈಗಾಗಲೇ ಆರಂಭಗೊಂಡಿದೆ ಎಂದು ಹೇಳಿದ್ದಾರೆ.
Advertisement
ನಾನು ಪಾಕಿಸ್ತಾನಕ್ಕೆ ಹರಿಯುವ ನೀರನ್ನು ನಿಲ್ಲಿಸುತ್ತಿರುವ ಬಗ್ಗೆ ಮಾತನಾಡುತ್ತೇನೆಯೇ ಹೊರತು ಇಂಡಸ್ ಒಪ್ಪಂದ ಉಲ್ಲಂಘನೆ ಮಾಡುತ್ತಿರುವ ಬಗ್ಗೆ ಅಲ್ಲ. ಪಾಕಿಸ್ತಾನಕ್ಕೆ ನಮ್ಮ ನೆಲದಿಂದ ಜಾಸ್ತಿ ನೀರು ಹರಿದು ಹೋಗುತ್ತದೆ. ನೀರನ್ನು ಸಂಗ್ರಹಿಸಲು ನಾವು ಜಲಾಶಯವನ್ನು ನಿರ್ಮಿಸುತ್ತಿದ್ದೇವೆ. ನಂತರ ಕಾಲುವೆಗಳ ಮೂಲಕ ನೀರನ್ನು ಹರಿಸಲಾಗುತ್ತದೆ ಎಂದು ವಿವರಿಸಿದರು.
Advertisement
Advertisement
ವಿದ್ಯುತ್ ಉತ್ಪಾದನೆಗೆ ಮಾತ್ರ ಜಲಾಶಯ ನಿರ್ಮಿಸುತ್ತಿಲ್ಲ. ಮಳೆ ಕಡಿಮೆಯಾದ ಸಂದರ್ಭದಲ್ಲಿ ನೀರನ್ನು ಹರಿಸಲು ಈ ಡ್ಯಾಂ ನಿರ್ಮಾಣ ಮಾಡುತ್ತಿದ್ದೇವೆ ಎಂದು ಸರ್ಕಾರದ ಕ್ರಮಕ್ಕೆ ಅವರು ಸಮರ್ಥನೆ ನೀಡಿದರು.
Advertisement
2016ರಲ್ಲಿ ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆದ ಬಳಿಕ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ಭಾರತದತ್ತ ತಿರುಗಿಸಲು ಯೋಜನೆ ರೂಪಿಸಿತ್ತು. ಈ ವಿಚಾರದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದ ಅಂದಿನ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ, ಉಗ್ರರಿಗೆ ಸಹಕಾರ ನೀಡುವುದನ್ನು ಮುಂದುವರಿಸಿದರೆ ಮುಂದೆ ಸಂಪೂರ್ಣವಾಗಿ ಭಾರತದಿಂದ ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಪಾಕಿಸ್ತಾನ ನಿರಂತರವಾಗಿ ಉಗ್ರರಿಗೆ ಸಹಕಾರ ನೀಡುತ್ತಾ ಬಂದಿದೆ. ಇನ್ನು ಮುಂದೆಯೂ ಸಹಕಾರ ನೀಡಿದರೆ ಭಾರತದಿಂದ ಹರಿಯುವ ನೀರನ್ನು ನಿಲ್ಲಿಸುತ್ತೇವೆ. ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಹರ್ಯಾಣ, ಪಂಜಾಬ್, ರಾಜಸ್ಥಾನಕ್ಕೆ ಹರಿಸಲಾಗುವುದು. ಈ ಸಂಬಂಧ ಈಗಾಗಲೇ ಅಧ್ಯಯನ ಆರಂಭಗೊಂಡಿದೆ ಎಂದು ತಿಳಿಸಿದ್ದರು.
ಮೂರು ನದಿಗಳ ನೀರು ಪಾಕಿಸ್ತಾನಕ್ಕೆ ಹರಿಯುತ್ತಿದೆ. ಈ ನೀರನ್ನು ನಿಲ್ಲಸಬೇಕು ಎನ್ನುವ ಇಚ್ಛೆ ನಮಗಿಲ್ಲ. ನದಿ ನೀರಿನ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸ್ನೇಹಯುತ ಸಂಬಂಧ ಇದ್ದ ಕಾರಣ ಈ ನದಿ ಒಪ್ಪಂದ ನಡೆದಿದೆ. ಆದರೆ ಈಗ ಎರಡು ದೇಶಗಳ ನಡುವಿನ ಸಂಬಂಧ ಮುರಿದು ಬಿದ್ದಿದೆ. ಹೀಗಾಗಿ ಈ ಒಪ್ಪಂದವನ್ನು ಪಾಲನೆ ಮಾಡಬೇಕಾದ ಅಗತ್ಯ ನಮಗಿಲ್ಲ ಎಂದು ಗಡ್ಕರಿ ಖಡಕ್ ಮಾತುಗಳನ್ನು ಆಡಿದ್ದರು.
ಮಾಜಿ ಪ್ರಧಾನಿ ಜವಾಹರಲಾಲ್ ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯುಬ್ ಖಾನ್ ನಡುವೆ 1960 ರಲ್ಲಿ ಇಂಡಸ್ ನದಿ ಯೋಜನೆ ಒಪ್ಪಂದ ನಡೆದಿತ್ತು. ಈ ಒಪ್ಪಂದದ ಪ್ರಕಾರ ಮೂರು ನದಿಗಳು ಭಾರತಕ್ಕೆ ಹಂಚಿಕೆಯಾದರೆ ಮೂರು ನದಿಗಳು ಪಾಕಿಸ್ತಾನಕ್ಕೆ ಹಂಚಿಕೆಯಾಗಿದೆ.
ಇಂಡಸ್ ನದಿ ನೀರಿನ ಒಪ್ಪಂದದ ಪ್ರಕಾರ ರಾವಿ, ಸಟ್ಲೇಜ್, ಬೀಯಾಸ್ ನದಿ ನೀರಿನ ಬಳಕೆ ಭಾರತಕ್ಕೆ ಮೀಸಲಾಗಿದ್ದರೆ, ಜೇಲಂ, ಚೀನಾಬ್ ಮತ್ತು ಇಂಡಸ್ ನದಿ ನೀರು ಪಾಕಿಸ್ತಾನಕ್ಕೆ ಹಂಚಿಕೆಯಾಗಿದೆ. ಈ ಒಪ್ಪಂದದ ಪ್ರಕಾರ ಭಾರತಕ್ಕೆ ಮೀಸಲಾಗಿರುವ ಮೂರು ನದಿಗಳ ನೀರನ್ನು ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಬಹುದಾಗಿದೆ.
ಈಗಾಗಲೇ ಯಮುನಾ ನದಿಯ ಪುನಶ್ಚೇತನಕ್ಕೆ ಹಲವು ಯೋಜನೆಗಳನ್ನು ಆರಂಭಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ಮೂರು ನದಿಗಳು ಭಾರತಕ್ಕೆ, ಮೂರು ನದಿಗಳನ್ನು ಪಾಕಿಸ್ತಾನಕ್ಕೆ ನೀಡಲಾಯಿತು. ಆದರೆ ಭಾರತ ಉದಾರ ಮನಸ್ಸಿನಿಂದ ನಿರಂತರವಾಗಿ ಪಾಕಿಸ್ತಾನಕ್ಕೆ ನೀರನ್ನು ನೀಡುತ್ತಲೇ ಇದೆ. ಆದರೆ ಈಗ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ಸಂಗ್ರಹಿಸಿ ನೀರಾವರಿ ಯೋಜನೆಯ ಮೂಲಕ ಜಮ್ಮು ಕಾಶ್ಮೀರ ಮತ್ತು ಪಂಜಾಬ್‍ಗೆ ನೀಡಲು ಮುಂದಾಗಿದ್ದೇವೆ ಎಂದು ಗಡ್ಕರಿ ತಿಳಿಸಿದ್ದರು.
ಈಗಾಗಲೇ ಪಂಜಾಬಿನ ಪಠಾಣ್‍ಕೋಟ್ ಜಿಲ್ಲೆಯ ಶಾಪಕುರ್ಕಿಂಡಿಯಲ್ಲಿ ರವಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣವಾಗುತ್ತಿದೆ. ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಈ ಜಲಾಶಯದಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ರವಿ ನದಿ ವ್ಯಾಪ್ತಿಯ ರಾಜ್ಯಗಳಿಗೆ ಈ ನೀರನ್ನು ಹರಿಸಲಾಗುತ್ತದೆ. ಈ ಯೋಜನೆಗಳು ರಾಷ್ಟ್ರೀಯ ಯೋಜನೆಗಳಾಗಿ ಘೋಷಿಸಲ್ಪಟ್ಟಿವೆ ಎಂದು ಗಡ್ಕರಿ ಟ್ವೀಟ್ ಮಾಡಿ ತಿಳಿಸಿದ್ದರು.
ಪುಲ್ವಾಮಾ ದಾಳಿಯ ಬಳಿಕ ಪಾಕಿಸ್ತಾನಕ್ಕೆ ನೀಡಿದ್ದ ಪರಮಾಪ್ತ ರಾಷ್ಟ್ರ ಸ್ಥಾನಮಾನವನ್ನು ಕಿತ್ತೆಸೆದು ಅಲ್ಲಿಂದ ದೇಶಕ್ಕೆ ರಫ್ತಾಗುತ್ತಿದ್ದ ಉತ್ಪನ್ನಗಳ ಮೇಲೆ ಶೇ.200 ರಷ್ಟು ಆಮದು ಸುಂಕವನ್ನು ಭಾರತ ವಿಧಿಸಿದೆ.