ಬೆಂಗಳೂರು: ವಿಜ್ಞಾನ ಮತ್ತು ಔಷಧ ವಿಜ್ಞಾನ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು ಆರಂಭಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ (JP Nadda) ಅವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಸಚಿವರು ಸಲ್ಲಿಸಿದ ಪತ್ರದಲ್ಲಿ, ಹಿಂದೊಮ್ಮೆ ಈ ಕೇಂದ್ರವನ್ನು ಕರ್ನಾಟಕದಲ್ಲಿ ಪ್ರಾರಂಭಿಸಬೇಕೆಂದು ಕೇಂದ್ರ ಸರ್ಕಾರವು ಆಲೋಚಿಸಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ರಾಜ್ಯದಲ್ಲಿರುವ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು, ಜೈವಿಕ ತಂತ್ರಜ್ಞಾನ (ಬಿ.ಟಿ.) ಕಂಪನಿಗಳು ಇತ್ಯಾದಿಗಳನ್ನು ಪರಿಗಣಿಸಿ ಈ ಚಿಂತನೆಗೆ ಮರುಜೀವ ನೀಡಬೇಕು. ಇದಕ್ಕೆ ಬೇಕಾದ ಭೂಮಿ, ಮೂಲಸೌಕರ್ಯ, ನೆರವು ಮತ್ತು ಸಹಭಾಗಿತ್ವದ ಅವಕಾಶಗಳನ್ನು ರಾಜ್ಯ ಸರ್ಕಾರವು ಕ್ಷಿಪ್ರ ಗತಿಯಲ್ಲಿ ಒದಗಿಸಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೋವಾದಲ್ಲಿ ಬಿಯರ್ ಬಾಟಲ್ ಹಿಡ್ಕೊಂಡು ಸುತ್ತಾಡಿದ ಸಚಿನ್ ಪುತ್ರಿ
ರಾಜ್ಯವು ಔಷಧ ವಿಜ್ಞಾನ, ಬಿ.ಟಿ ಮತ್ತು ಆರೋಗ್ಯ ಸೇವೆಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಅದರಲ್ಲೂ ಬೆಂಗಳೂರೊಂದರಲ್ಲೇ 400ಕ್ಕೂ ಹೆಚ್ಚು ಬಿ.ಟಿ. ಕಂಪನಿಗಳಿವೆ. ಜೊತೆಗೆ ಇಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಜೀವ ವಿಜ್ಞಾನಗಳ ಕೇಂದ್ರ (ಎನ್.ಸಿ.ಬಿ.ಎಸ್), ಬಯೋಇನ್ಫರ್ಮ್ಯಾಟಿಕ್ಸ್ ಮತ್ತು ಅಪ್ಲೈಡ್ ಬಯೋಟೆಕ್ನಾಲಜಿ (ಐಬಿಎಬಿ) ಮುಂತಾದ ಪ್ರತಿಷ್ಠಿತ ಸಂಸ್ಥೆಗಳಿವೆ. ರಾಜ್ಯ ಸರ್ಕಾರದ ಬಯೋ-ಇನ್ನೋವೇಶನ್ ಸೆಂಟರ್ ಮತ್ತು ರಚನಾತ್ಮಕ ಬಿ.ಟಿ. ನೀತಿಯ ಮೂಲಕ ಈ ಕ್ಷೇತ್ರದ ನವೋದ್ಯಮಗಳಿಗೆ ಬೆಂಬಲ ಕೊಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
ದೇಶದಲ್ಲಿರುವ ಬಿ.ಟಿ. ಕಂಪನಿಗಳ ಪೈಕಿ ಶೇ.60ರಷ್ಟು ರಾಜ್ಯದಲ್ಲೇ ಇವೆ. ಭಾರತವು ಮಾಡುತ್ತಿರುವ ಒಟ್ಟು ಔಷಧಗಳ ರಫ್ತಿನಲ್ಲಿ ರಾಜ್ಯದ ಪಾಲು ಶೇಕಡ 12ರಷ್ಟಿದೆ. ಅಲ್ಲದೆ ಕ್ಲಿನಿಕಲ್ ಸಂಶೋಧನೆ, ವೈದ್ಯಕೀಯ ಸಾಧನ ಸಲಕರಣೆಗಳ ತಯಾರಿಕೆ ಮತ್ತು ಎಪಿಐ ಉತ್ಪಾದನೆಯ ಕಾರ್ಯಜಾಲ ನಮ್ಮಲ್ಲಿದೆ. ಇವೆಲ್ಲವುಗಳನ್ನು ಪರಿಗಣಿಸಿ ರಾಜ್ಯಕ್ಕೆ ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು ಮಂಜೂರು ಮಾಡಬೇಕು ಎಂದು ಪತ್ರದಲ್ಲಿ ಗಮನ ಸೆಳೆದಿದ್ದಾರೆ.ಇದನ್ನೂ ಓದಿ: ಬುರುಡೆ ಕೇಸ್| ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ನ್ಯಾಯಾಲಯಕ್ಕೆ ವಕಾಲತ್ತು ಸಲ್ಲಿಕೆ

