ವಾಷಿಂಗ್ಟನ್: ಗಗನಯಾತ್ರಿಗಳನ್ನು ಚಂದ್ರ, ಮಂಗಳ ಸೇರಿದಂತೆ ಅದರಾಚೆಗಿನ ಗ್ರಹಗಳೆಡೆಗೆ ಕಳುಹಿಸಲು ವಿನ್ಯಾಸಗೊಳಿಸಲಾಗಿದ್ದ ಅತ್ಯಂತ ಶಕ್ತಿಶಾಲಿ ರಾಕೆಟ್ ಸ್ಟಾರ್‌ಶಿಪ್ (Starship) ವಾರಗಳ ಹಿಂದೆ ಪರೀಕ್ಷಾರ್ಥ ಹಾರಾಟದ ವೇಳೆ ಸ್ಫೋಟಗೊಂಡಿತ್ತು. ಇದೀಗ ದೈತ್ಯ ರಾಕೆಟ್ ಅನ್ನು ಕಂಪನಿ ಮತ್ತೆ ನಿರ್ಮಾಣ ಮಾಡಲು ಮುಂದಾಗಿದ್ದು, ಕೇವಲ 6-8 ವಾರಗಳಲ್ಲಿ ಇದು ಸಿದ್ಧಗೊಳ್ಳಲಿದೆ ಎಂದು ಸ್ಪೇಸ್‌ಎಕ್ಸ್‌ನ (SpaceX) ಸಿಇಒ ಎಲೋನ್ ಮಸ್ಕ್ (Elon Musk) ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಸ್ಕ್, ಇತ್ತೀಚೆಗೆ ಪರೀಕ್ಷಾರ್ಥ ಹಾರಾಟದ ವೇಳೆ ಸ್ಫೋಟಗೊಂಡಿದ್ದ ಸ್ಟಾರ್‌ಶಿಪ್ ರಾಕೆಟ್‌ನ (Rocket) ಹಾನಿ ಸಣ್ಣಮಟ್ಟಾಗಿದೆ ಎಂಬುದನ್ನು ತಿಳಿಸಲು ಸಂತಸಪಡುತ್ತೇನೆ. ಇದರ ಮತ್ತೆ ಉಡಾವಣೆಗೆ ಅಗತ್ಯವಾದ ಮೂಲಸೌಕರ್ಯವನ್ನು ಪಡೆಯಲು 6 ರಿಂದ 8 ವಾರಗಳು ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಏಪ್ರಿಲ್ 17ರಂದು ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನಿಲ್ದಾಣದಿಂದ ಸ್ಟಾರ್‌ಶಿಪ್ ಅನ್ನು ಉಡಾವಣೆ ಮಾಡಲು ಮೊದಲು ನಿರ್ಧರಿಸಲಾಗಿತ್ತು. ಆದರೆ ಬೂಸ್ಟರ್ ಹಂತದಲ್ಲಿ ಒತ್ತಡದ ಸಮಸ್ಯೆಯಿಂದ ದೈತ್ಯ ರಾಕೆಟ್‌ನ ಪರೀಕ್ಷಾರ್ಥ ಉಡಾವಣೆಯನ್ನು ನಿಗದಿಪಡಿಸಲಾಗಿದ್ದ ಕೆಲವೇ ನಿಮಿಷಗಳ ಮೊದಲು ಸ್ಥಗಿತಗೊಳಿಸಿ 3 ದಿನಗಳ ಕಾಲ ಮುಂದೂಡಲಾಯಿತು. ಇದನ್ನೂ ಓದಿ: ಕಾಕ್‍ಪಿಟ್‍ಗೆ ಸ್ನೇಹಿತೆ ಕರೆದೊಯ್ದ ಪೈಲೆಟ್ – ಏರ್ ಇಂಡಿಯಾ ಸಿಇಒಗೆ ಶೋಕಾಸ್ ನೋಟಿಸ್
ಬಳಿಕ ಏಪ್ರಿಲ್ 20ರಂದು ಸ್ಟಾರ್‌ಶಿಪ್ ಅನ್ನು ಪರೀಕ್ಷಾರ್ಥವಾಗಿ ಹಾರಾಟ ನಡೆಸಿದಾಗ ಅದು ಸ್ಫೋಟಗೊಂಡಿತ್ತು. ರಾಕೆಟ್ 3 ನಿಮಿಷಗಳ ಉಡಾವಣೆಯಾದ ಬಳಿಕ ಸ್ಟಾರ್‌ಶಿಪ್ ನೌಕೆಯನ್ನು ಮೊದಲ ಹಂತದಲ್ಲಿ ಬೇರ್ಪಡಿಸಲು ನಿಗದಿಪಡಿಸಲಾಗಿತ್ತು. ಆದರೆ ಬೇರ್ಪಡಿಸಲು ವಿಫಲವಾಗಿ ರಾಕೆಟ್ ಸ್ಫೋಟಗೊಂಡಿತು ಎಂದು ಸ್ಪೇಸ್‌ಎಕ್ಸ್ ತಿಳಿಸಿತ್ತು.
ಇದೀಗ ಮಸ್ಕ್ ತಿಳಿಸಿದಂತೆ ಸ್ಟಾರ್‌ಶಿಪ್ ಅನ್ನು 6-8 ವಾರಗಳಲ್ಲಿ ಮತ್ತೆ ಹಾರಾಟಕ್ಕೆ ಸಿದ್ಧಪಡಿಸಿದರೂ ಅಮೆರಿಕ ಸರ್ಕಾರದ ಫೆಡರಲ್ ಏವಿಯೇಷನ್ ಅಥಾರಿಟಿ (FAA) ಸ್ಟಾರ್‌ಶಿಪ್ ಸ್ಫೋಟದ ಬಗ್ಗೆ ತನಿಖೆಯ ಮೇಲ್ವಿಚಾರಣೆಯನ್ನು ನಡೆಸುತ್ತಿದೆ ಎಂಬುದು ಗಮನಾರ್ಹ ವಿಚಾರ. ಆ ತನಿಖೆ ಮುಗಿಯುವವರೆಗೂ ಸ್ಪೇಸ್‌ಎಕ್ಸ್‌ಗೆ ಮತ್ತೊಂದು ಸ್ಟಾರ್‌ಶಿಪ್‌ನ ಉಡಾವಣೆಗೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಸೋಲಿಗೆ ಕಾರಣವನ್ನು ಕನ್ನಡಿಯಲ್ಲಿ ಹುಡುಕಲಿ: ವಾರ್ನರ್ ವಿರುದ್ಧ ಭಜ್ಜಿ ಕಿಡಿ